
ಕಳಸ:ತೋಟದೂರು ಗ್ರಾಮದ ವಸತಿರಹಿತರಿಗೆ ನಿವೇಶನ ಕೊಡಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷ ಇಂದು ತೋಟದೂರು ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತು.
ಪಂಚಾಯತಿ ವ್ಯಾಪ್ತಿಯ ವಸತಿರಹಿತರು ಕೆಂಪು ಬಾವುಟ ಹಿಡಿದು ಬಾಳೆಹೊಳೆಯಿಂದ ಮೆರವಣಿಗೆಯಲ್ಲಿ ಪಂಚಾಯಿತಿ ಕಚೇರಿವರೆಗೆ ತಲುಪಿದರು.ವಿವಿಧ ಘೋಷಣೆಗಳನ್ನು ಕೂಗುತ್ತಾ ಬಂದ ಪ್ರತಿಭಟನಾಕಾರರು ಅಕ್ರೋಶಗೊಂಡಿದ್ದರು.
ಸಿಪಿಐ ಮುಖಂಡ ಗೋಪಾಲ ಶೆಟ್ಟಿ ಮಾತನಾಡಿ, ತೋಟದೂರು ಪಂಚಾಯಿತಿಯಲ್ಲಿ 77 ವಸತಿರಹಿತರ ಹೆಸರು ಇದೆ. ಇದರ ಜೊತೆಗೆ ಇನ್ನೂ ಸುಮಾರು 100 ಬಡವರು ನಿವೇಶನ, ಮನೆಗಾಗಿ ಕಾದಿದ್ದಾರೆ. ಅವರಲ್ಲಿ ಕೆಲವರು 94 ಸಿ ಅರ್ಜಿಯಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ಮಂಜೂರಾತಿಗಾಗಿ ಕಾದಿದ್ದಾರೆ.ಉಳಿದವರಿಗೆ ಈಗಲೂ ನಿವೇಶನ ಹೊಂದುವುದು ಕನಸೇ ಆಗಿದೆ ಎಂದು ಹೇಳಿದರು.
ಈ ಪೈಕಿ ಹೆಚ್ಚಿನವರು ಪರಿಶಿಷ್ಟ ಜಾತಿ ಮತ್ತು ವರ್ಗದವರೇ ಆಗಿದ್ದರೂ ಅವರಿಗೆ ನಿವೇಶನ ಕೊಡಿಸುವ ಬದ್ಧತೆ ಯಾವ ಜನಪ್ರತಿನಿಧಿಗಳಿಗೂ, ಅಧಿಕಾರಿಗಳಿಗೂ ಇಲ್ಲವಾಗಿದೆ ಎಂದು ಗೋಪಾಲ ಶೆಟ್ಟಿ ಬೇಸರಿಸಿದರು.
ಸಿಪಿಐ ಮುಖಂಡ ಲಕ್ಷ್ಮಣಾಚಾರ್ ಮಾತನಾಡಿ, ನಿವೇಶನರಹಿತರ ಪರವಾಗಿ ಭಾರತ ಕಮ್ಯುನಿಸ್ಟ್ ಪಕ್ಷ ಕಳೆದ 2 ದಶಕದಿಂದ ಹೋರಾಟ ಮಾಡುತ್ತಿದೆ. ವಿಪರ್ಯಾಸ ಎಂದರೆ ಇಷ್ಟು ದೀರ್ಘ ಕಾಲ ಕಳೆದರೂ ಈಗಲೂ ಅರ್ಹ ಬಡವರಿಗೆ ನಿವೇಶನ ಕೊಟ್ಟಿಲ್ಲ ಎಂದು ಕಿಡಿಕಾರಿದರು.
ಆಶ್ರಯ ಸಮಿತಿ ಅಧ್ಯಕ್ಷರಾಗಿರುವ ಶಾಸಕಿ ನಯನಾ ಮೋಟಮ್ಮ ಈ ಬಾರಿ ಅರ್ಹ ಫಲಾನುಭವಿಗಳಿಗೆ ನಿವೇಶನ ಒದಗಿಸಲು ಸೂಕ್ತ ಕ್ರಮ ವಹಿಸಬೇಕು ಎಂದೂ ಅವರು ಆಗ್ರಹಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೂಲಕ ಶಾಸಕರಿಗೆ ಮನವಿ ಪತ್ರ ರವಾನಿಸಲಾಯಿತು. ಸಿಪಿಐ ಮುಖಂಡರಾದ ರಮೇಶ್ ಕೆಳಗೂರು, ಗೋಪಾಲ, ಕಾರ್ಯಕರ್ತರು, ತೋಟದೂರಿನ ವಸತಿರಹಿತರು ಭಾಗವಹಿಸಿದ್ದರು.