
ಕಳಸ:ಭಕ್ತರಿಗೆ ಅನ್ನ ಖಾತರಿಪಡಿಸುವ ತಾಯಿ ಎಂದೇ ಹೆಸರಾದ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಿಯ ರಥೋತ್ಸವ ಇಂದು ಸಂಭ್ರಮದಿಂದ ನೆರವೇರಿತು.
ಮೊನ್ನೆ, ಶುಕ್ರವಾರ ಗಣಪತಿ ಪೂಜೆಯೊಂದಿಗೆ ರಥೋತ್ಸವದ ಧಾರ್ಮಿಕ ವಿಧಿಗಳು ಆರಂಭಗೊಂಡಿದ್ದವು.ಶನಿವಾರ ಧ್ವಜಾರೋಹಣ ಮತ್ತು ಪುಷ್ಪಕಾರೋಹಣ ಸಂಪ್ರದಾಯದಂತೆ ನೆರವೇರಿತ್ತು.
ಇಂದಿನ ರಥೋತ್ಸವ ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧೆಡೆಯಿಂದ ಭಕ್ತರು ನಿನ್ನೆಯಿಂದಲೇ ಬಂದು ಕಾತರಿಸಿದ್ದರು.
ರಥೋತ್ಸವಕ್ಕಾಗಿ ದೇವಸ್ಥಾನದ ಸುತ್ತಲೂ ಹೂಗಳಿಂದ ಮತ್ತು ವಿದ್ಯುತ್ ದೀಪಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.
ವಿಶೇಷ ಪೂಜೆ ನೆರವೇರಿದ ನಂತರ ಉತ್ಸವ ಮೂರ್ತಿಯನ್ನು ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆಯಲ್ಲಿ ಕರೆದೊಯ್ಯಲಾಯಿತು.
ಮಂಗಳವಾದ್ಯದ ಜೊತೆಗೆ ಬಣ್ಣ ಬಣ್ಣದ ಧ್ವಜ ಪತಾಕೆಗಳು ಉತ್ಸವಕ್ಕೆ ಮೆರುಗು ನೀಡಿತ್ತು.ದೇವಸ್ಥಾನದ ಆಡಳಿತ ಸಮಿತಿಯ ಜಿ.ಭೀಮೇಶ್ವರ ಜೋಷಿ, ರಾಮನಾರಾಯಣ ಜೋಷಿ, ರಾಜಗೋಪಾಲ ಜೋಷಿ, ಕೆ.ಕೆ.ಬಾಲಕೃಷ್ಣ ಭಟ್, ವೆಂಕಟಸುಬ್ಬಯ್ಯ ಮತ್ತಿತರ ಗಣ್ಯರು ಭಾಗವಹಿಸಿದ್ದರು.
ಆನಂತರ ರಥಬೀದಿಯಲ್ಲಿ ಉತ್ಸವ ಮೂರ್ತಿಯ ರಥಾರೋಹಣ ಭಕ್ತರ ಹರ್ಷೋದ್ಘಾರದ ನಡುವೆ ನಡೆಯಿತು. ದೇವಿಯ ಭಕ್ತರು ತಾವು ಬೆಳೆದ ಕಾಫಿ, ಅಡಿಕೆ, ಕಾಳುಮೆಣಸು, ಏಲಕ್ಕಿಯನ್ನು ರಥದೆಡೆಗೆ ತೂರಿ ದೇವಿಯ ಮಹಿಮೆ ಬಗ್ಗೆ ನಂಬಿಕೆ ತೋರಿದರು.ಆನಂತರ ಭಕ್ತರು ರಥವನ್ನು ಉತ್ಸಾಹದಿಂದ ಎಳೆದರು.