
ಕಳಸ:ಇಲ್ಲಿನ ಕೆಪಿಎಸ್ ಶಾಲೆಯ ಅಟಲ್ಜೀ ಟಿಂಕರಿಂಗ್ ಪ್ರಯೋಗಾಲಯಕ್ಕೆ ಯುನಿಸೆಫ್ ಸಂಸ್ಥೆಯ ಸಿಬ್ಬಂದಿ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಟಲ್ಜೀ ಪ್ರಯೋಗಾಲಯಗಳ ಬಗ್ಗೆ ಅಧ್ಯಯನ ಮಾಡಲು ರಾಜ್ಯದ 6 ಪ್ರಯೋಗಾಲಯಗಳನ್ನು ಯುನಿಸೆಫ್ ಆಯ್ಕೆ ಮಾಡಿತ್ತು. ಆ ಪೈಕಿ ಕಳಸ ಕೆಪಿಎಸ್ ಶಾಲೆ ಕೂಡ ಒಂದಾಗಿದ್ದು ಯುನಿಸೆಫ್ ತಂಡ ಶುಕ್ರವಾರ ಕಳಸಕ್ಕೆ ಬಂದಿತ್ತು.
ಕೆಪಿಎಸ್ ಪ್ರಯೋಗಾಲಯದಲ್ಲಿ ಇರುವ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದ ತಂಡ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಜೊತೆ ಸೂಕ್ಷ್ಮ ಸಂದರ್ಶನ ನಡೆಸಿತು.ವಿದ್ಯಾರ್ಥಿಗಳ ಸೃಜನಶೀಲತೆ, ವಿಶ್ಲೇಷಣಾ ಸಾಮಥ್ರ್ಯ ಮತ್ತು ಆವಿಷ್ಕಾರ ಶಕ್ತಿಯನ್ನು ಯುನಿಸೆಫ್ ತಂಡ ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿತು.
ಶಾಲಾ ಉಪಪ್ರಾಂಶುಪಾಲ ಸುರೇಶ್ ಮಾತನಾಡಿ, ನಮ್ಮ ಶಾಲೆಯ ಪ್ರಯೋಗಾಲಯವನ್ನು ಯುನಿಸೆಫ್ ಸಂಸ್ಥೆ ಅಧ್ಯಯನಕ್ಕೆ ಆಯ್ಕೆ ಮಾಡಿರುವುದಕ್ಕೆ ಧನ್ಯವಾದ ಅರ್ಪಿಸಿದರು. ಅಟಲ್ ಪ್ರಯೋಗಾಲಯದ ತರಬೇತುದಾರ ಸಂದೇಶ್ ಮಾತನಾಡಿ, ಗ್ರಾಮೀಣ ಪರಿಸರದ ಮಕ್ಕಳ ಸೃಜನಶೀಲತೆ, ಶಿಕ್ಷಕರ ಬದ್ಧತೆ, ಸ್ಥಳೀಯರ ಸಹಕಾರದ ಕಾರಣಕ್ಕೆ ಪ್ರಯೋಗಾಲಯ ಹೆಸರು ಗಳಿಸಿದೆ ಎಂದರು.