
ಕಳಸ:ತಾಲ್ಲೂಕು ಕೇಂದ್ರಕ್ಕೆ ಬೇಕಾದ ಭೂಮಿ ಇಲ್ಲ ಎಂದು ಕಂದಾಯ ಇಲಾಖೆ ಕೈಚೆಲ್ಲುತ್ತಿದೆ. ಆದರೆ ವಿವಿಧ ಇಲಾಖೆಗಳ ಕಚೇರಿಗಳಿಗೆ ಮತ್ತು ವಸತಿಗೃಹಕ್ಕೆ ಬೇಕಾದ 90 ಎಕರೆ ಭೂಮಿ ಪಟ್ಟಣಕ್ಕೆ ಹತ್ತಿರದ ಸರ್ವೆ ನಂಬರ್ 641ರಲ್ಲಿ ಇದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ ತಿಳಿಸಿದೆ.
ತಾಲ್ಲೂಕಿನ ಕಂದಾಯ ಭೂಮಿ ಅತಿಕ್ರಮಣ ತಡೆದು ಜನರ ಉಪಯೋಗಕ್ಕೆ ಉಳಿಸುವಂತೆ ಭಾರತ ಕಮ್ಯುನಿಸ್ಟ್ ಪಕ್ಷ ಪಟ್ಟಣದಲ್ಲಿ ಸೋಮವಾರ ಧರಣಿ ನಡೆಸಿತು.ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಿಪಿಐ ಕಾರ್ಯಕರ್ತರು ಮೆರವಣಿಗೆ ನಡೆಸಿ ಆನಂತರ ತಾಲ್ಲೂಕು ಕಚೇರಿ ಮುಂದೆ ಜಮಾಯಿಸಿದರು.
ಅಲ್ಲಿ ಮಾತನಾಡಿದ ಸಿಪಿಐ ಮುಖಂಡ ಲಕ್ಷ್ಮಣಾಚಾರ್, ಕಳಸದ ಮಾವಿನಕೆರೆ ಗ್ರಾಮದ ಸರ್ವೆ ನಂಬರ್ 641ರಲ್ಲಿ ಬಹಳಷ್ಟು ಸರ್ಕಾರಿ ಭೂಮಿಯನ್ನು ಕಬಳಿಸಲಾಗಿದೆ. ಈ ಬಗ್ಗೆ ಹಿಂದಿನ ಎಲ್ಲ 12 ತಹಶೀಲ್ದಾರರಿಗೆ ಮನವಿ ಕೊಟ್ಟರೂ ಪ್ರಯೋಜನ ಆಗಿಲ್ಲ.ಕಳಸ ತಾಲ್ಲೂಕು ಕೇಂದ್ರ ಆಗಿರುವ ಹಿನ್ನೆಲೆಯಲ್ಲಿ ಅನೇಕ ಸರ್ಕಾರಿ ಕಟ್ಟಡಗಳಿಗೆ ಜಾಗವೇ ಇಲ್ಲವಾಗಿದೆ. ಆದರೆ ಕಳಸ ಪಟ್ಟಣಕ್ಕೆ ಹತ್ತಿರವೇ ಇರುವ ಸರ್ವೆ ನಂಬರ್ 641ರಲ್ಲಿ ಸಾಕಷ್ಟು ಭೂಮಿ ಇದ್ದರೂ ಅದನ್ನು ಬಳಕೆ ಮಾಡಲು ಒತ್ತುವರಿ ಸಮಸ್ಯೆ ಅಡ್ಡಿ ಆಗಿದೆ ಎಂದು ದೂರಿದರು.
ಕಳಸಕ್ಕೆ ಹತ್ತಿರದಲ್ಲೇ ಬಾಳೆಹೊನ್ನೂರು ರಸ್ತೆಗೆ ಹೊಂದಿಕೊಂಡಿರುವ ಈ ಸರ್ವೆ ನಂಬರಿನಲ್ಲಿ ತಾಲ್ಲೂಕು ಆಸ್ಪತ್ರೆ, ತಾಲ್ಲೂಕು ಕ್ರೀಡಾಂಗಣ, ಸಿಬ್ಬಂದಿ ವಸತಿಗೃಹ ಮತ್ತಿತರ ಇಲಾಖೆಗಳ ಕಟ್ಟಡ ನಿರ್ಮಿಸಲು ಸಾಕಷ್ಟು ಭೂಮಿ ಇದೆ. ಈ ಸರ್ವೆ ನಂಬರಿನಲ್ಲಿ ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿಕೊಂಡಿರುವ ಭೂಮಿ ತೆರವು ಮಾಡಿದರೆ ಎಲ್ಲ ಉದ್ದೇಶಕ್ಕೂ ಜಾಗ ಸಿಗುತ್ತದೆ. ಆದ್ದರಿಂದ ಈ ಸರ್ವೆ ನಂಬರ್ ಅನ್ನು ಸಂಪೂರ್ಣವಾಗಿ ಸರ್ವೆ ಮಾಡಿ ಸರ್ಕಾರಿ ಭೂಮಿ ಗುರುತಿಸಬೇಕು ಎಂದು ಲಕ್ಷ್ಮಣಾಚಾರ್ ಆಗ್ರಹಿಸಿದರು.
ಸಿಪಿಐ ಮುಖಂಡ ಕೆಳಗೂರು ರಮೇಶ್ ಮಾತನಾಡಿ, ಕಳಸ ತಾಲ್ಲೂಕಿನಲ್ಲಿ ಅಕ್ರಮ ಭೂಮಂಜೂರಾತಿ ಬಗ್ಗೆ ಹೋರಾಟಕ್ಕೆ ಪಕ್ಷ ಚಾಲನೆ ನೀಡುತ್ತಿದೆ.10 ಸಾವಿರ ಎಕರೆಗೂ ಹೆಚ್ಚು ಅಕ್ರಮ ಭೂಮಿ ಮಂಜೂರಾತಿ ಆಗಿದ್ದು ತಪ್ಪಿತಸ್ಥ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಆಗಬೇಕು ಎಂದು ಪಕ್ಷ ಆಗ್ರಹಿಸಿತ್ತು. ಸರ್ಕಾರ ಶಿಸ್ತು ಕ್ರಮದ ಪ್ರಕ್ರಿಯೆ ಆರಂಭಿಸಿದೆ ಎಂದರು.
ಕಳಸ ತಾಲ್ಲೂಕು ಕ್ರೀಡಾಂಗಣಕ್ಕೆ ಅನುದಾನ ಇದ್ದರೂ ಇಲ್ಲಿ ಜಾಗ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು. ಸರ್ವೆ ನಂಬರ್ 641ರಲ್ಲಿ ನಾವು ಕ್ರೀಡಾಂಗಣಕ್ಕೆ ಜಾಗ ತೋರಿಸಿದೆವು. ಅಲ್ಲಿ ಬಹಳಷ್ಟು ಭೂಮಿ ಇದೆ ಎಂದು ನಾವು ದಾಖಲೆಗಳ ಮೂಲಕ ತೋರಿಸಿದ ನಂತರ ಅಲ್ಲಿ 12 ಎಕರೆ ಜಾಗವನ್ನು ತಾಲ್ಲೂಕು ಕ್ರೀಡಾಂಗಣಕ್ಕೆ ಇಂದು ಗುರುತಿಸಿದ್ಧಾರೆ ಎಂದು ರಮೇಶ್ ಹೇಳಿದರು.
ಕಳಸ ತಾಲ್ಲೂಕಿನ ಬಡ ಕೃಷಿಕರಿಗೆ ನಕಲಿ ಸಾಗುವಳಿ ಚೀಟಿ ಕೊಡುವ ದಂಧೆ ಈಗಲೂ ಇದೆ. ಜನರಿಂದ ಲಕ್ಷಗಟ್ಟಲೆ ಹಣ ಪಡೆದು ನಕಲಿ ಸಾಗುವಳಿ ಚೀಟಿ ಕೊಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಸರ್ವೆ ನಂಬರ್ 641ರಲ್ಲಿ 92 ಎಕರೆ ಸರ್ಕಾರಿ ಭೂಮಿ ಇದೆ. ಇದನ್ನು ಗುರುತು ಮಾಡಿ ವಶಕ್ಕೆ ಪಡೆಯಬೇಕು.ತಾಲ್ಲೂಕು ಅಭಿವೃದ್ಧಿಗೆ ಬೇಕಾದ ಜಾಗ ಅಲ್ಲೇ ಸಿಗುತ್ತದೆ ಎಂದು ರಮೇಶ್ ತಿಳಿಸಿದರು.
ಪಕ್ಷದ ಮುಖಂಡರಾದ ಗೋಪಾಲ ಶೆಟ್ಟಿ, ಗೋಪಾಲ ಹಡ್ಲು, ಗಣೇಶ್ ಹೊರನಾಡು, ಮೋಹನ್ ಹಿರೇಬೈಲ್ ಮತ್ತಿತರರು ಇದ್ದರು. ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಈ ಬಗ್ಗೆ ಮನವಿ ಸಲ್ಲಿಸಲಾಯಿತು.