ರವಿ ಕೆಳಂಗಡಿ
ಕಳೆದ ಒಂದು ತಿಂಗಳಿ0ದ ಅಪ್ಪಾಜಿಯ ಮಾನಸಿಕ ಆರೋಗ್ಯ ಹದಗೆಟ್ಟಾಗೆಲ್ಲ ಅವರು ಹೀಗಾಗಲು ಕಾರಣ ಏನಿರಬಹುದು ಎಂದು ಬಹಳಷ್ಟು ಯೋಚನೆ ಮಾಡುತ್ತಲೇ ಇದ್ದೆ.
ಅಪರಿಮಿತ ಸವಾಲು ಮತ್ತು ಸೀಮಿತ ಅವಕಾಶಗಳ ವಲಯದಲ್ಲಿ ತಮ್ಮ ಬದುಕನ್ನು ರೂಪಿಸಿಕೊಳ್ಳಲು ಅವರು ಮೆದುಳಿಗೆ ಅತಿ ಹೆಚ್ಚು ಕೆಲಸ, ಒತ್ತಡ ಕೊಟ್ಟಿದ್ದು ಮಾನಸಿಕ ಆರೋಗ್ಯ ಹದಗೆಡಲು ಕಾರಣವಿರಬಹುದೇ ಎಂಬುದು ದೊಡ್ಡ ಅನುಮಾನ.
ತನ್ನ ತಂದೆಯ ಪ್ರೀತಿ ಸಿಗದ ನತದೃಷ್ಟ ನನ್ನ ಅಪ್ಪ.ನಮ್ಮ ಅಜ್ಜ ಬ್ರಹ್ಮಯ್ಯ ಶೆಟ್ಟಿ ಚಿಕ್ಕಮಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ಕಳಸದಲ್ಲಿ ಹುಟ್ಟಿದ ನನ್ನ ಅಪ್ಪನಿಗೆ ತನ್ನ ತಂದೆಯನ್ನು ಕಾಣುವ ಭಾಗ್ಯವೇ ಇರಲಿಲ್ಲ. ತಂದೆ ಪ್ರೀತಿಯನ್ನು ಪಡೆಯದ ನನ್ನ ಅಪ್ಪಾಜಿ ನಮಗೂ ಅದನ್ನು ಕೊಡುವುದರಲ್ಲಿ ಕೊಂಚ ಉದಾಸೀನತೆ ತೋರಿದರೇನೋ ಎಂಬುದು ನನಗೆ ಬಾಲ್ಯದಿಂದ ಕಾಡುತ್ತಿದ್ದ ಅನುಮಾನ.
ಆದರೆ ಇದಕ್ಕೆ ಬದಲಾಗಿ ಅವರು ನನ್ನ ಕೃಷಿ ಬದುಕಿಗೆ ಬೇಕಾದ ಭದ್ರ ಬುನಾದಿ ಹಾಕಿಕೊಟ್ಟಿದ್ದು ಮಾತ್ರ ನನ್ನ ಜನ್ಮದುದ್ದಕ್ಕೂ ನೆನಪಿಸಿಕೊಳ್ಳಬೇಕಾದ ಸಂಗತಿ. “ಏನು ಬೇಕಾದರು ಓದು.ಊರಿಗೆ ವಾಪಸ್ ಬಾ. ಬಹಳ ಕಷ್ಟ ಪಟ್ಟು ತೋಟ ಮಾಡಿದ್ದೀನಿ. ಇದನ್ನು ಉಳಿಸಬೇಕು.ಕೃಷಿಯಲ್ಲಿ ಇರುವಷ್ಟು ನೆಮ್ಮದಿ ಯಾವುದರಲ್ಲೂ ಇಲ್ಲ” ಎಂದು ಅವರು ಸದಾ ಹೇಳುತ್ತಿದ್ದರು.
೧೯೬೮ರಲ್ಲಿ ಚಿಕ್ಕಮಗಳೂರಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿ0ಗ್ ಡಿಪ್ಲೊಮ ಫಸ್ಟ್ ಕ್ಲಾಸ್ನಲ್ಲಿ ಮುಗಿಸಿ ಕಳಸಕ್ಕೆ ಬರುವಾಗ ಅವರ ಮನೆ ಸುತ್ತಲೂ ಇದ್ದಿದ್ದು ದಟ್ಟ ಕಾಡು ಮತ್ತು ಗೇಣಿ ಕೊಟ್ಟಿದ್ದ ಭತ್ತದ ಗದ್ದೆ.ಆದರೆ ಧೈರ್ಯವಂತ ತಾಯಿ, ನನ್ನ ಅಜ್ಜಿ ಪದ್ಮಾವತಿ, ಪ್ರಾಮಾಣಿಕತೆಯ ಮತ್ತೊಂದು ಹೆಸರೇ ಆಗಿದ್ದ ನನ್ನ ಅಪ್ಪಾಜಿಯ ಸೋದರ ಮಾವ ಎಡದಾಳು ನೇಮಿರಾಜಯ್ಯ, ಮತ್ತೊಬ್ಬ ಮಾವ ಮಣ್ಣಿನಪಾಲು ಪಟೇಲರಾದ ವರ್ಧಮಾನ ಶೆಟ್ಟರು ಅವರ ಬೆನ್ನಿಗೆ ಇದ್ದರು.
ಬೆಂಗಳೂರಿನ ಮೈಕೋ, ಮದ್ರಾಸ್ನ ಎಂಇಜಿ ಸಂಸ್ಥೆಯಲ್ಲಿ ಸಿಕ್ಕಿದ್ದ ಉದ್ಯೋಗ ಬಿಟ್ಟು ಅತ್ಯಂತ ಕಡಿಮೆ ಆದಾಯದ ಕಳಸದ ಕೃಷಿ ಭೂಮಿಗೆ ಮರಳುವಾಗ ಅಪ್ಪಾಜಿಗೆ ಇದ್ದ ಧೈರ್ಯದ ಲೆಕ್ಕಾಚಾರ ಏನು ಎಂಬುದು ಈಗಲೂ ನನಗೆ ಸೋಜಿಗವೇ.ಅವರ ಈ ಧೈರ್ಯದ ತೀರ್ಮಾನವೇ ನಾನು ಕೂಡ ೨೫ ವರ್ಷದ ಹಿಂದೆ ಕಂಪ್ಯೂಟರ್ ಎಂಜಿನಿಯರಿ0ಗ್ ಬಿಟ್ಟು ಕೃಷಿಗೆ ಮರಳಲು ಪ್ರೇರಣೆ ಆಗಿತ್ತು.

೧೯೬೮ರಲ್ಲಿ ಊರಿಗೆ ಮರಳಿದಾಗ ಅವರಿಗೆ ೨೧ ವರ್ಷ ವಯಸ್ಸು.ಮೊದಲಿಗೆ ಗೇಣಿಗೆ ಕೊಟ್ಟಿದ್ದ ಗದ್ದೆ ಬಿಡಿಸಿಕೊಂಡರು.ಅಲ್ಪ ಅವಧಿಯಲ್ಲೇ ಇಂಟಾನ್ ಭತ್ತದ ಕೃಷಿಯಲ್ಲಿ ಪ್ರಶಸ್ತಿ ಕೂಡ ಗಳಿಸುವಷ್ಟು ನಿಪುಣರಾದರು.ಸ್ವಲ್ಪ ಸ್ವಲ್ಪವೇ ಕಾಫಿ ತೋಟ ಮಾಡುವ ಪ್ರಯತ್ನಕ್ಕೆ ಕೈ ಹಾಕಿದರು.ಆದರೆ ಬಂಡವಾಳದ ಕೊರತೆಯಿಂದ ಕಂಗಾಲಾಗಿ ಅಕ್ಕಿ ವ್ಯಾಪಾರ ಶುರು ಮಾಡಿದರು. ಬೇಸಿಗೆಯ ಭತ್ತದ ಬೆಳೆ, ಉದ್ದು, ಹೆಸರುಕಾಳು ಬೆಳೆವ ಪ್ರಯತ್ನ ಕೂಡ ಮಾಡಿದರು.ಯಾವುದರಲ್ಲೂ ವಿಫಲರಾಗದೆ ಅಷ್ಟಿಷ್ಟು ಹಣ, ಅಪಾರ ಅನುಭವ ಗಳಿಸಿದರು.
ಮುಂದೆ ಕುದುರೆಮುಖದಲ್ಲಿ ಮೈನಿಂಗ್ ಶುರು ಆದಾಗ ಎಲ್ಐಸಿ ಏಜೆನ್ಸಿ ಪಡೆದ ಅಪ್ಪಾಜಿ ಆ ಮೂಲಕ ಕೃಷಿ ಜೊತೆಗೆ ಮತ್ತೊಂದು ಆದಾಯದ ಪ್ರಯತ್ನ ಶುರು ಮಾಡಿದರು.ರ್ಯಾಲಿ ಸೈಕಲ್ ಖರಿದಿಸಿ ಕಳಸದಿಂದ ಕುದುರೆಮುಖದವರೆಗೂ ಸೈಕಲ್ ತುಳಿದರು.
ಸತತ ಪರಿಶ್ರಮ, ವಾಕ್ ಚಾತುರ್ಯದ ಮೂಲಕ ಅವರು ಎಲ್ಐಸಿಯ ಅಗ್ರಮಾನ್ಯ ಏಜೆಂಟ್ ಆದರು.ಅಲ್ಲಿ ಬಹಳಷ್ಟು ದುಡಿದರು.ಡೆವಲೆಪ್ಮೆಂಟ್ ಆಫೀಸರ್ ಹುದ್ದೆ ಸಿಕ್ಕರೂ ಕೃಷಿಯೇ ಆದ್ಯತೆ ಎಂದು ನಿರಾಕರಿಸಿದರು.
ಯುವಕ ಸಂಘದ ಕಾರ್ಯದರ್ಶಿಯಾಗಿ, ಕಳಸೇಶ್ವರ ದೇವಸ್ಥಾನದ ಕನ್ವೀನರ್ ಆಗಿ, ಸರ್ವೋದಯ ತೀರ್ಥ ಸಮಿತಿ ಕಾರ್ಯದರ್ಶಿಯಾಗಿ ವರ್ಷಗಳ ಕಾಲ ಪ್ರಾಮಾಣಿಕ ಸೇವೆ ಮಾಡಿದ್ದರು.
ಎಲ್ಐಸಿಯಲ್ಲಿ ದುಡಿದ ಹಣದಿಂದ ಹೊಸದಾಗಿ ಕಾಫಿ ತೋಟ ಮಾಡುವ ಅವರ ಹುಮ್ಮಸ್ಸಿಗೆ ಶಕ್ತಿ ಬಂದಿತ್ತು.ಎಲ್ಲರೂ ಕಾಫಿ ಬೇರುಗಿಡದ ಮೂಲಕ ತೋಟ ಅಭಿವೃದ್ಧಿ ಮಾಡುತ್ತಿದ್ದ ಕಾಲದಲ್ಲಿ ಅಪ್ಪಾಜಿ ಸಿಆರ್ಎಸ್ ಕಾಫಿ ಸಂಶೋಧನಾ ಕೇಂದ್ರಕ್ಕೆ ಹೋಗಿ ಅಲ್ಲಿ ಅನೇಕ ವಿಷಯ ಕಲಿತು ಅಲ್ಲಿಂದಲೇ ಸೆಲೆಕ್ಷನ್ ೨೭೪ ಕಾಫಿಬೀಜ ತಂದರು.೧೯೭೩ರಲ್ಲಿ ಮೊದಲಿಗೆ ಅವರು ಮಾಡಿದ ಈ ತೋಟ ಈಗಲೂ ನಮ್ಮ ಪಾಲಿಗೆ ಚಾಂಪಿಯನ್.
ಅವರ ಎಂಜಿನಿಯರಿ0ಗ್ ಬುದ್ಧಿಯನ್ನು ಕಾಫಿ ತೋಟದಲ್ಲಿ ಬಳಸಿ ತೋಟವನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದರು.ಆನಂತರದ ವರ್ಷಗಳಲ್ಲಿ ಮತ್ತೆ ೩ ಚಿಕ್ಕ ತೋಟ ಮಾಡಿದ್ದರು.ನಾವು ಪ್ರಾಥಮಿಕ ಶಾಲೆಗೆ ಹೋಗುವ ವೇಳೆಗೆ ನಮ್ಮ ಸುತ್ತಮುತ್ತಲಿನಲ್ಲಿ ನಾವೇ ದೊಡ್ಡ ಕಾಫಿ ಬೆಳೆಗಾರರಂತೆ ಇದ್ದೆವು. ಹತ್ತಾರು ಅನಕ್ಷರಸ್ಥ ಕಾಫಿ ಬೆಳೆಗಾರರಿಗೆ ಟಿಪಿ೩ ಬರೆದುಕೊಡುವ ಮೂಲಕ ಜನಪ್ರಿಯರಾಗಿದ್ದರು.ಎಲ್ಲರಿಗೂ ಭತ್ತ, ಕಾಪಿ, ಮೆಣಸಿನ ಕೃಷಿಯ ಮಾಹಿತಿ ಹಂಚುತ್ತಿದ್ದರು.
ಸದಾ ಗದ್ದೆ, ತೋಟದಲ್ಲೇ ಬಿಳಿ ಟೊಪ್ಪಿ ಹಾಕಿಕೊಂಡು ಇರುತ್ತಿದ್ದ ಅಪ್ಪಾಜಿ ಕಾರ್ಮಿಕರನ್ನು ಕೂಡ ಅತ್ಯಂತ ಶಿಸ್ತಿನಿಂದ ಇಟ್ಟುಕೊಂಡಿದ್ದರು.ಅವರ ಜೊತೆ ಪ್ರೀತಿಯಿಂದ ಮಾತನ್ನಾಡುತ್ತಿದ್ದರೂ ಹಣಕಾಸಿನ ವಿಚಾರದಲ್ಲಿ ತುಂಬಾ ಕಟ್ಟುನಿಟ್ಟಾಗಿದ್ದರು.ತೋಟದ ಲೆಕ್ಕಾಚಾರ ಮತ್ತು ಕೆಲಸದ ವಿವರವನ್ನು ಪ್ರತಿದಿನವೂ ಪುಸ್ತಕದಲ್ಲಿ ಬರೆದಿಡುವ ದಿನಚರಿ ತಪ್ಪಿಸುತ್ತಿರಲಿಲ್ಲ.ಹಾಲುವಾಣ ಗೂಟ, ಭತ್ತದ ಹುಲ್ಲು, ಭತ್ತದ ಸಸಿ, ಬಾಳೆಕಾಯಿ, ಸೌದೆ ಮಾರಾಟದಿಂದ ಕೂಡ ಸಾಕಷ್ಟು ಹಣವನ್ನು ಅವರು ಗಳಿಸುತ್ತಿದ್ದರು.
ನಮ್ಮ ಜಮೀನಿನ ಕೆಲ ಭೂ ವ್ಯಾಜ್ಯಗಳನ್ನು ಬಹಳ ಬುದ್ದಿವಂತಿಕೆಯಿ0ದ ನಿರ್ವಹಿಸಿದ್ದರು.ಹತ್ತಾರು ಬಾರಿ ಸರ್ವೆ ಮಾಡಿಸಿದ್ದರು. ಕೆರೆ ತೋಡಿಸಿ ನೀರಾವರಿ ಯತ್ನ ಮಾಡಿದ್ದರು.ತೋಟದ ಬೇಲಿಗೆಂದು ಸದಾ ಚಿಕ್ಕಮಗಳೂರಿನ ಅಣ್ಣೇಗೌಡ ಸಂಸ್ಥೆಯಿ0ದ ಮುಳ್ಳುತಂತಿ ತರುತ್ತಿದ್ದ ಅವರು ಬೇಲಿಗೆ ತಂತಿ ಕಟ್ಟುವ ಕೆಲಸವನ್ನು ಸ್ವತಃ ಮಾಡುತ್ತಿದ್ದರು.
ನಾನು ಕಾಲೇಜು ಬಿಟ್ಟು ಬಂದ ನಂತರ ಭತ್ತದ ಗದ್ದೆಯನ್ನೆಲ್ಲಾ ಕಾಫಿ, ಅಡಿಕೆ ತೋಟವಾಗಿ ಪರಿವರ್ತನೆ ಮಾಡುವ ತೀರ್ಮಾನ ಮಾಡಿದ್ದರು.೪ ವರ್ಷಗಳ ಈ ಪ್ರಕ್ರಿಯೆಯಲ್ಲಿ ಪ್ರತಿ ವರ್ಷವೂ ನಾನು ಮತ್ತು ಅವರು ಇಬ್ಬರೇ ಬೇಲಿಗೆ ಮುಳ್ಳು ತಂತಿ ಕಟ್ಟಬೇಕಿತ್ತು.ವಾರಗಟ್ಟಲೇ ಬಿಸಿಲಲ್ಲಿ ಕೆಲಸ ಮಾಡಿಸಿ ನನ್ನ ತಾಳ್ಮೆ ಪರೀಕ್ಷೆ ಮಾಡುತ್ತಿದ್ದರು. ತೋಟದಲ್ಲಿ ಬರುವ ಸವಾಲು ಎದುರಿಸುವ ಬಗ್ಗೆ ಮತ್ತು ಅದನ್ನು ನಿವಾರಿಸುವ ಉಪಾಯಗಳ ಬಗ್ಗೆ ಸದಾ ನನ್ನ ಕಿವಿಯಲ್ಲಿ ತುಂಬುತ್ತಲೇ ಇದ್ದರು.
೧೦ ವರ್ಷ ತೋಟದಲ್ಲಿ ನನ್ನಿಂದ ಎಲ್ಲ ಕೆಲಸ ಮಾಡಿಸಿ ನನ್ನ ಸಾಮರ್ಥ್ಯ ಖಾತರಿಯಾದ ನಂತರ ತೋಟವನ್ನು ನನಗೆ ವಹಿಸಿದರು. ಆ ೧೦ ವರ್ಷ ಪ್ರತಿದಿನ ನನಗೆ ಕೃಷಿ ಬಗ್ಗೆ ಕೊಡುತ್ತಿದ್ದ ಸೂಚನೆಗಳು ಆಗ ಕಿರಿಕಿರಿ ಎನಿಸುತ್ತಿದ್ದವು.ಆದರೆ ಈಗ ನೆರವಿಗೆ ಬರುತ್ತಿವೆ. ೧೯೭೫ರಲ್ಲೇ ಕೇರಳದವರಿಂದ ಬಳ್ಳಿ ತರಿಸಿ ಆನಂತರದ ೨ ದಶಕ ಕ್ವಿಂಟಾಲ್ಗಟ್ಟಲೆ ಕಾಳುಮೆಣಸು ಬೆಳೆದಿದ್ದ ಅಪ್ಪಾಜಿ ಆ ಕಾಲಕ್ಕೆ ಕಳಸದ ಕೃಷಿ ವಲಯದಲ್ಲಿ ಬಹುದೊಡ್ಡ ಸಂಚಲನ ತಂದಿದ್ದವರು.
ಕಾಫಿ ಕೃಷಿ ಕೂಡ ಬಹಳ ವೈಜ್ಞಾನಿಕವಾಗಿ ಮಾಡುತ್ತಿದ್ದ ಅಪ್ಪಾಜಿ ಎಕರೆಗೆ ೩೦-೪೦ ಚೀಲ ಕೊಯ್ಯುತ್ತಿದ್ದರು.ಕಾಫಿ, ಮೆಣಸನ್ನು ವರ್ಷಗಟ್ಟಲೆ ದಾಸ್ತಾನು ಮಾಡಿ ಗರಿಷ್ಟ ಬೆಲೆ ಸಿಕ್ಕಾಗ ಮಾರಾಟ ಮಾಡುತ್ತಿದ್ದರು.ತಮ್ಮ ಜೀವನದ ಯಾವುದೇ ಹಂತದಲ್ಲೂ ಬ್ಯಾಂಕ್ ಸಾಲವನ್ನು ಅವರು ಮಾಡಿರಲಿಲ್ಲ.ಉಳಿತಾಯದ ಹಣವನ್ನು ಬ್ಯಾಂಕುಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ಇರಿಸುತ್ತಿದ್ದರು.ಅವರ ಲೆಕ್ಕದ ಪುಸ್ತಕಗಳಲ್ಲಿ ಪ್ರತಿ ಪೈಸೆ ಆದಾಯ ಖರ್ಚಿನ ದಾಖಲೆ ಇರುತ್ತಿತ್ತು.ಕಟ್ಟುನಿಟ್ಟಿನ ಮತ್ತು ಅತಿಯಾದ ಲೆಕ್ಕಾಚಾರದ ಕಾರಣಕ್ಕೆ ನಮ್ಮ ಅಮ್ಮನಿಗೂ ಅವರಿಂದ ಹೆಚ್ಚಿನ ಖುಷಿ ಸಿಕ್ಕಿರಲಿಲ್ಲ.

೩೫ ವರ್ಷದ ಹಿಂದೆ ನಮ್ಮ ಮನೆತನದ ಪದ್ಮಾವತಿ ದೇವಸ್ಥಾನದ ಬಗ್ಗೆ ಎದ್ದ ವಿವಾದದ ಕಾರಣಕ್ಕೆ ಹಠ ತೊಟ್ಟು ಒಂದು ವಾರದಲ್ಲೇ ಅಪ್ಪಾಜಿ ತಮ್ಮ ಮಾವ ಮಣ್ಣಿನಪಾಲು ವರ್ಧಮಾನ ಶೆಟ್ಟಿ ಅವರಿಂದ ಪೂಜೆ ಕಲಿತರು.ಆನಂತರ ಆಧ್ಯಾತ್ಮದತ್ತ ವಾಲಿದ ಅವರು ಮುಂದಿನ ೩ ದಶಕ ಪೂಜೆ, ವ್ರತ, ಉಪವಾಸದ ಸೆಳೆತಕ್ಕೆ ಸಿಲುಕಿದರು.
ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳ ಕೊರತೆಯಿಂದ ಅವರ ಮೆದುಳು ಸರಿಯಾಗಿ ಕೆಲಸ ಮಾಡದೆ ಕಳೆದ ೩ ವರ್ಷದಿಂದ ಆಲ್ಝೈಮರ್ ರೋಗ ಬಾಧಿಸತೊಡಗಿತು.ಒಮ್ಮೊಮ್ಮೆ ಮಾನಸಿಕ ನಿಯಂತ್ರಣ ಕೂಡ ಕಳೆದುಕೊಳ್ಳುತ್ತಿದ್ದ ಅವರು ಕೊನೆ ದಿನಗಳಲ್ಲಿ ಸಾಕಷ್ಟು ನೋವು ಅನುಭವಿಸಿದರು.
ನನಗೆ ೨೦೦೭ರಲ್ಲಿ ತೋಟ ವಹಿಸಿದಾಗ ಯಾವುದೇ ಹಣ ಕೊಡದೆ ಮನೆಯಲ್ಲಿ ಇದ್ದ ೩೦ ಕ್ವಿಂಟಾಲ್ ಮೆಣಸು ಕೊಟ್ಟಿದ್ದರು.ತಿಂಗಳಿಗೆ ಅಗತ್ಯವಿದ್ದಷ್ಟು ಮೆಣಸು ಮಾರಾಟ ಮಾಡಿ ತೋಟ ನಡೆಸು ಎಂದು ಎಚ್ಚರಿಕೆ ಕೊಟ್ಟಿದ್ದರು. ನಾನು ಆ ಮೆಣಸನ್ನು ೨ ವರ್ಷ ಹಂತಹ0ತವಾಗಿ ಮಾರಾಟ ಮಾಡಿ ನಾನು ತೋಟಕ್ಕೆ ಮಾಡಿದ್ದ ಸ್ಪಿ0ಕ್ಲರ್ ಸಾಲ ಸಲೀಸಾಗಿ ತೀರಿಸಲು ಅವಕಾಶ ಆಗಿತ್ತು.ಈಗಲೂ ಅವರ ಸಲಹೆಯಂತೆ ಬೆಳೆಯನ್ನು ಸಂಗ್ರಹಿಸಿ ಉತ್ತಮ ಬೆಲೆ ಬಂದ ದಿನ ಮಾರಾಟ ಮಾಡುವುದು ಲಾಭಕರ ಎಂದು ಮನದಟ್ಟಾಗಿದೆ.
ತೋಟವನ್ನು ನನಗೆ ವಹಿಸಿದ ನಂತರ ಅಪ್ಪಾಜಿ ಸುಮ್ಮನೆ ಕೂರಲಿಲ್ಲ.ತನಗೆ ಮಾಹಿತಿಯೇ ಇರದಿದ್ದ ಶೇರು ಮಾರುಕಟ್ಟೆ ಬಗ್ಗೆ ಅಧ್ಯಯನ ಮಾಡಿ ಅದರಲ್ಲಿ ಕೂಡ ದೊಡ್ಡ ಮೊತ್ತ ಗಳಿಸಿದ್ದರು. ಆ ಮೊತ್ತದಲ್ಲಿ ದೊಡ್ಡ ಪಾಲನ್ನು ನಮ್ಮ ಹೊಸ ಮನೆ ನಿರ್ಮಾಣದ ಕೊನೆ ಹಂತದಲ್ಲಿ ನನಗೆ ಕೊಟ್ಟು ನನ್ನ ಮರ್ಯಾದೆ ಕೂಡ ಉಳಿಸಿದ್ದರು.
ನನ್ನ ಅವಧಿಯಲ್ಲಿ ತೋಟದಲ್ಲಿ ಮೆಣಸಿನ ಬಳ್ಳಿಗಳೆಲ್ಲ ರೋಗದಿಂದ ಸತ್ತು ಹೋದವು. ಕಾಫಿ, ಅಡಿಕೆ ಫಸಲು ಏರುತ್ತಿದ್ದರೂ ಮೆಣಸು ನಾಮಾವಷೇಶ ಆದ ಬಗ್ಗೆ ಅವರಿಗೆ ಬಹಳ ಬೇಸರ ಇತ್ತು. ‘ಸಿಕ್ಕಾಪಟ್ಟೆ ಗರ್ನಮೆಂಟ್ ಗೊಬ್ಬರ ಹಾಕಿ ಬಳ್ಳಿಯೆಲ್ಲ ಸಾಯಿಸಿಬಿಟ್ಟಿ’ ಎಂದು ಸದಾ ಕೋಪ ಹೊರಹಾಕುತ್ತಿದ್ದರು. ಹಠಕ್ಕೆ ಬಿದ್ದಂತೆ ನಾನು ಕೂಡ ವರ್ಷಕ್ಕೆ ೧೦೦೦ ಮೆಣಸಿನ ಬಳ್ಳಿ ನೆಟ್ಟು ಔಷಧಿ, ಗೊಬ್ಬರ ಕೊಡುತ್ತಿದ್ದರೂ ಅವರು ಬೆಳೆದಷ್ಟು ಮೆಣಸನ್ನು ಆಗಿನ ತೋಟದ ದುಪ್ಪಟ್ಟು ತೋಟದಲ್ಲಿ ಕೂಡ ಬೆಳೆಯಲು ಆಗಿಲ್ಲ ಎಂಬ ನೋವು ನನಗೆ ಕೂಡ ಇದೆ.
ತಮ್ಮ ಜೀವನದ ಉದ್ದಕ್ಕೂ ಗುಣಮಟ್ಟದ ವಸ್ತುಗಳಿಗೆ ಮನ್ನಣೆ ಕೊಡುತ್ತಿದ್ದ ಅವರು ನಮಗೆ ಬಾಟಾ, ಡಕ್ಬ್ಯಾಕ್ ಶೂ, ವಿಐಪಿ ಸಂಸ್ಥೆಯ ಉತ್ಪನ್ನವನ್ನೆ ಕೊಡಿಸುತ್ತಿದ್ದರು.ನಾನು ಮೊದಲ ಸೈಕಲ್ ಕೊಳ್ಳುವಾಗ ಹೀರೋ ಸೈಕಲ್ ಬೇಕು ಎಂದರೂ ಆ ಕಾಲಕ್ಕೆ ದುಬಾರಿ ಆಗಿದ್ದ ಬಿಎಸ್ಎ ಸೈಕಲ್ ಕೊಡಿಸಿದ್ದರು.
ನನಗೆ ಅವರ ಬಗ್ಗೆ ಇದ್ದ ಅತ್ಯಂತ ಬೇಸರದ ಸಂಗತಿ ಎಂದರೆ ಅವರ ಬಾಯಲ್ಲಿ ನನ್ನ ಬಗ್ಗೆ ಎಂದಿಗೂ ಮೆಚ್ಚುಗೆಯ ಮಾತೇ ಬಂದಿರಲಿಲ್ಲ. ಹಣಕಾಸಿನ ವಿಚಾರದಲ್ಲಿ ನನ್ನ ಲಿಬರಲ್ ಧೋರಣೆ ಅವರಿಗೆ ಸದಾ ಸಿಟ್ಟು ತರುತ್ತಿತ್ತು. ಆಧ್ಯಾತ್ಮದ ಬಗ್ಗೆ ನನಗೆ ಅವರಷ್ಟು ನಂಬಿಕೆ, ಆಚರಣೆಗೆ ಪುರುಸೊತ್ತು ಇರದಿದ್ದುದು ಅವರ ಪಾಲಿಗೆ ದೊಡ್ಡ ಅಪರಾಧದಂತೆ ಕಾಣತೊಡಗಿತ್ತು. ತೋಟದಲ್ಲಿ ಬಂದ ಹಣದ ಲೆಕ್ಕ ಕೊಡು ಎಂದು ಇತ್ತೀಚೆಗೆ ದುಂಬಾಲು ಬೀಳುತ್ತಿದ್ದರು.ಐಷಾರಾಮಿ ಜೀವನ ಒಳ್ಳೆಯದಲ್ಲ, ಸರಳ ಬದುಕು ಸಾಕು ಎಂದು ಎಚ್ಚರಿಸುತ್ತಿದ್ದರು.
ತಮ್ಮ ಜೀವನದ ಯಾವ ಹಂತದಲ್ಲೂ ಊರು ಬಿಟ್ಟು ಹೋಗಲು ಇಚ್ಛೆ ಪಡದಿದ್ದ ಅವರು ಇತ್ತೀಚೆಗೆ ಪ್ರತಿದಿನವೂ ನಮ್ಮ ಊರು ಕಳಸಕ್ಕೆ ಹೋಗಬೇಕು ಎಂದು ಬಟ್ಟೆ ಪ್ಯಾಕ್ ಮಾಡುತ್ತಲೇ ಇದ್ದರು.ಮೊನ್ನೆ ಪರಲೋಕದ ಯಾತ್ರೆ ಮಾಡಿಯೇ ಬಿಟ್ಟರು.
೨೫ ವರ್ಷದ ಹಿಂದೆ ನಾನು ಕಾಲೇಜು ಬಿಟ್ಟು ಊರಿಗೆ ಮರಳಿದಾಗ ಅವಮಾನದಿಂದ ಸೊನ್ನೆ ಆಗಿದ್ದೆ.ಊರು ಬಿಟ್ಟು ಓಡಿ ಹೋಗಿ ಯಾವುದಾದರೂ ಕೆಲಸಕ್ಕೆ ಸೇರೋಣ ಎಂದೂ ಅನಿಸಿತ್ತು.ಆದರೆ ಅಪ್ಪಾಜಿಯ ತಾಳ್ಮೆ ನನ್ನ ಬದುಕನ್ನು ಕಟ್ಟಿಕೊಟ್ಟಿತು.ತಿಂಗಳಿಗೆ ೫೦೦ ರೂಪಾಯಿ ಸಂಬಳದಲ್ಲಿ ಅವರೊಂದಿಗೆ ನಾನು ೧೦ ವರ್ಷ ಕಲಿತ ಕೃಷಿಯ ಪಟ್ಟುಗಳು ಇಂದು ನನ್ನನ್ನು ಈ ಕ್ಷೇತ್ರದಲ್ಲಿ ತಕ್ಕಮಟ್ಟಿಗೆ ಮುಂದಕ್ಕೆ ತಂದಿದೆ.
ನಾನು ಪ್ರತಿ ಬಾರಿ ಶಾಲೆಯಲ್ಲಿ ಮೊದಲ ರ್ಯಾಂಕ್ ಪಡೆದಾಗಲೂ ‘ಹಿಂಗೇ ಉದಾಸೀನ ಮಾಡಿದ್ರೆ ಮುಂದಿನ ಸಲ ನೀನು ಫೇಲ್’ ಎಂದು ಸದಾ ನನಗೆ ಎಚ್ಚರಿಕೆ ಕೊಡುತ್ತಿದ್ದರು.ಅವರ ಈ ಎಚ್ಚರಿಕೆಯ ಕಾರಣಕ್ಕೆ ಇರಬೇಕು, ನಾನು ಜೀವನದಲ್ಲಿ ಈಗ ಮಾಡುವ ಎಲ್ಲ ಕೆಲಸದಲ್ಲೂ ಅಪಾಯ, ನಷ್ಟ ಗ್ರಹಿಸಿ ಅತ್ಯಂತ ಕರಾರುವಾಕ್ಕಾದ ಪ್ರಯತ್ನ ಮಾಡುತ್ತಿದ್ದೇನೆ.
ನನಗೆ ಆಗಾಗ್ಗೆ ಪ್ರತಿಸ್ಪರ್ಧಿಯಂತೆ ಕಂಡರೂ ನನಗೇ ಅರಿವಿಲ್ಲದಂತೆ ಅವರನ್ನು ನಾನು ಬಹುತೇಕ ವಿಚಾರದಲ್ಲಿ ಅನುಕರಿಸಿದ್ದೇನೆ.ನನ್ನ ಕೃಷಿಕ ಜೀವನದ ಯಶಸ್ಸಿನ ದೊಡ್ಡ ಪಾಲು ಅವರದೇ. ನನ್ನ ಅಕ್ಕನ ಜೀವನದ ಸರ್ವಸ್ವವೇ ಅವರು ಆಗಿದ್ದರು.ನನ್ನ ಜೀವನದ ಅತಿ ಖುಷಿ ಕೊಟ್ಟ ಸೈಕಲ್ ಪಯಣದ ಸಾರಥಿ ಆಗಿದ್ದ ಅಪ್ಪಾಜಿಗೆ ಶುಭ ವಿದಾಯ..!!!
