ಕಳಸ:ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಬಗ್ಗೆ ಮತ್ತಷ್ಟು ಸಕಾರಾತ್ಮಕ ಸುದ್ದಿ ಬರುತ್ತಿದೆ. ಕಳೆದ ತಿಂಗಳು ಆಸ್ಪತ್ರೆಗೆ ಜನಸ್ನೇಹಿ ವೈದ್ಯ ಡಾ.ಕಾರ್ತಿಕ್ ಶೆಟ್ಟಿ ಬಂದ ನಂತರ ಆಸ್ಪತ್ರೆಯ ಲಕ್ಷಣವೇ ಬದಲಾಗಿದೆ. ಕಾರ್ತಿಕ್ ಶೆಟ್ಟಿ ಅವರಿಂದ ಪ್ರತಿದಿನ 150 ರಷ್ಟು ರೋಗಿಗಳು ಶುಶ್ರೂಷೆ ಪಡೆಯುತ್ತಿದ್ದಾರೆ. ಆಸ್ಪತ್ರೆಯ ಇತರೆ ಸಿಬ್ಬಂದಿಯೂ ಚುರುಕಾಗಿದ್ದು ಆರೋಗ್ಯ ಕೇಂದ್ರದ ಬಗ್ಗೆ ಬಡವರಿಗೆ ಮತ್ತು ಕಾರ್ಮಿಕರಿಗೆ ಭರವಸೆ ಬಂದಿದೆ.
ಈ ಸಂತಸದ ನಡುವೆಯೇ ಆಸ್ಪತ್ರೆಗೆ ಅತ್ಯಾಧುನಿಕ ಡಿಜಿಟಲ್ ಎಕ್ಸ್ರೇ ಯಂತ್ರ ಲಭ್ಯವಾಗಿದೆ. ಕಳಸ ತಾಲ್ಲೂಕು ಪಂಚಾಯಿತಿಯ ಅನಿರ್ಭಂಧಿತ ಅನುದಾನದಲ್ಲಿ 10 ಲಕ್ಷ ವೆಚ್ಚದಲ್ಲಿ ಈ ಎಕ್ಸ್ರೇ ಯಂತ್ರ ಖರೀದಿಸಲಾಗಿದೆ.
ಈ ಆಧುನಿಕ ಯಂತ್ರ ಬಳಸಿ ನಿಖರವಾದ ಎಕ್ಸ್ರೇ ತೆಗೆಯಬಹುದಾಗಿದ್ದು ರೋಗಿಗಳ ಶುಶ್ರೂಷೆಗೆ ಸಹಕಾರಿ ಆಗಲಿದೆ. ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಸಕಿ ನಯನಾ ಮೋಟಮ್ಮ ಈ ಹಿಂದೆ ಭೇಟಿ ನೀಡಿದ್ದಾಗ ಆಧುನಿಕ ಡಿಜಿಟಲ್ ಎಕ್ಸ್ರೇ ಯಂತ್ರದ ಅಗತ್ಯತೆ ಬಗ್ಗೆ ಸ್ಥಳೀಯರು ಬೇಡಿಕೆ ಸಲ್ಲಿಸಿದ್ದರು.
ಈ ಮನವಿಗೆ ಓಗೊಟ್ಟ ನಯನಾ ಮೋಟಮ್ಮ ಕೂಡಲೇ ತಾಲ್ಲೂಕು ಪಂಚಾಯಿತಿ ಅನುದಾನದಲ್ಲಿ ಎಕ್ಸ್ರೇ ಯಂತ್ರ ಖರೀದಿಸಲು ಅಗತ್ಯ ಪ್ರಕ್ರಿಯೆಗೆ ಚಾಲನೆ ನೀಡಿದ್ದರು. ಅದರಂತೆ ಎಕ್ಸ್ರೇ ಯಂತ್ರ ಆಸ್ಪತ್ರೆಗೆ ಬಂದಿದ್ದು ವೈದ್ಯ ಡಾ.ಕಾರ್ತಿಕ್ ಶೆಟ್ಟಿ ಯಂತ್ರ ಸ್ವೀಕರಿಸಿದರು. ಆರೋಗ್ಯ ರಕ್ಷಾ ಸಮಿತಿ ಸದಸ್ಯ ವೀರೇಂದ್ರ, ತಾಲ್ಲೂಕು ಪಂಚಾಯಿತಿ ಲೆಕ್ಕ ಪರಿಶೋಧಕ ಸಂತೋಷ್, ಆಸ್ಪತ್ರೆ ಸಿಬ್ಬಂದಿ ಇದ್ದರು.
