ಕಳಸ:ದೋಷಪೂರಿತ ಮಳೆ ಮಾಪನ ಕೇಂದ್ರಗಳಿಂದಾಗಿ ಕಳೆದ ಸಾಲಿನ ಬೆಳೆ ವಿಮೆ ಮೊತ್ತವು ಅತ್ಯಲ್ಪವಾಗಿದ್ದು ಕೃಷಿಕರಿಗೆ ಅನ್ಯಾಯ ಆಗಿದೆ.ಮಳೆ ಮಾಪನ ಕೇಂದ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಎಚ್ಚರ ವಹಿಸಬೇಕು ಎಂದು ಅನೇಕ ಮುಖಂಡರು ಮಂಗಳವಾರ ಆಗ್ರಹಿಸಿದರು.
ಬೆಳೆ ವಿಮೆ ಬಗ್ಗೆ ಎದ್ದಿರುವ ಅಪಸ್ವರಗಳ ಹಿನ್ನೆಲೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಟರ್ಮ್ ಶೀಟ್ ವಿನ್ಯಾಸ ಮಾಡುವ ಬಗ್ಗೆ ತೋಟಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳ ತಂಡ ಕೃಷಿಕರ ಜೊತೆ ಕಳಸ ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಸಂವಾದ ಏರ್ಪಡಿಸಿತ್ತು.
ಬಿಜೆಪಿ ಮುಖಂಡ ಶೇಷಗಿರಿ ಮಾತನಾಡಿ, ಕಳೆದ ವರ್ಷದ ವಿಮೆ ಪಾವತಿ ವೇಳೆಗೆ ಕೃಷಿಕರಿಗೆ ಅನ್ಯಾಯ ಆಗಿದೆ. ಪ್ರೀಮಿಯಂ ಹಣದ ಎರಡು ಪಟ್ಟು ಮಾತ್ರ ಮೊತ್ತ ಪಾವತಿ ಆಗಿದೆ. ದೋಷಪೂರಿತ ಮಳೆ ಮಾಪನ ಕೇಂದ್ರದ ಕಾರಣಕ್ಕೆ ಕೃಷಿಕರು ಬೆಳೆ ವಿಮೆಯಿಂದ ವಂಚಿತರಾಗಿದ್ದಾರೆ ಎಂದು ಬೊಟ್ಟು ಮಾಡಿದರು.
ಈ ಬಾರಿ ಮಳೆ ಮಾಪನ ಕೇಂದ್ರಗಳ ನಿರ್ವಹಣೆ ಕಂದಾಯ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಸಂಬಂಧಪಟ್ಟ ಗ್ರಾಮಗಳ ಗ್ರಾಮ ಆಡಳಿತ ಅಧಿಕಾರಿಗಳಿಗೆ ಅದರ ಜವಾಬ್ದಾರಿ ಹೊರಿಸಿದ್ದೇವೆ. ಕಳಸ ತಾಲ್ಲೂಕಿನ ವಿವಿಧೆಡೆ ಇರುವ ಮಳೆ ಮಾಪನ ಕೇಂದ್ರಗಳ ಬಗ್ಗೆ ಸಂಬಂಧಪಟ್ಟವರಿಗೆ ತರಬೇತಿ ನೀಡಲಾಗುತ್ತದೆ. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳು ಸ್ಪಷ್ಟ ಆದೇಶ ಹೊರಡಿಸಿದ್ದಾರೆ ಎಂದು ತಹಶೀಲ್ದಾರ್ ಶಾರದಾ ತಿಳಿಸಿದರು.

ವಿಮೆ ಮೊತ್ತ ಸಿಗದಿರಲು ಟರ್ಮ್ ಶೀಟಿನಲ್ಲಿ ಕೂಡ ನ್ಯೂನ್ಯತೆ ಇದೆ. ಜೂನ್, ಜುಲೈ ತಿಂಗಳಲ್ಲಿ ಒಟ್ಟು ಮಳೆ ಪ್ರಮಾಣದ ಆಧಾರದ ಮೇಲೆ ವಿಮೆ ಸಿಗಬೇಕು, ಆಗಸ್ಟ್, ಸೆಪ್ಟೆಂಬರ್ ಜೊತೆಗೆ ಅಕ್ಟೋಬರ್ ತಿಂಗಳಲ್ಲಿ ಕೂಡ ಮಳೆ ಸುರಿಯುತ್ತಿದ್ದು ವಿಮೆಯ ಸುರಕ್ಷೆ ರೈತರಿಗೆ ಸಿಗಬೇಕು ಎಂದು ಕಾಂಗ್ರೆಸ್ ಮುಖಂಡ ಹಿತ್ತಲಮಕ್ಕಿ ರಾಜೇಂದ್ರ ಸಲಹೆ ನೀಡಿದರು. ಟರ್ಮ್ಶೀಟಿಗೆ ಕೆಲ ಬದಲಾವಣೆ ತರಲು ಕೂಡ ಅವರು ಸಲಹೆ ನೀಡಿದರು.
ಕಳಸ ಸಹಕಾರ ಸಂಘದ ಅಧ್ಯಕ್ಷ ಮಂಜಪ್ಪಯ್ಯ ಮಾತನಾಡಿ, ಸ್ಥಳೀಯ ಅಧಿಕಾರಿಗಳು ಬೆಳೆ ಹಾನಿ ಆದ ಪ್ರದೇಶಗಳಿಗೆ ಭೇಟಿ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಹಾನಿಯಾದ ಕೃಷಿಕರಿಗೆ ಪರಿಹಾರ ನೀಡಬೇಕು. ಮಳೆ ಮಾಪನ ಕೇಂದ್ರದ ಆಧಾರದ ಮೇಲೆ ವಿಮೆ ಮೊತ್ತ ಬಿಡುಗಡೆ ಮಾಡುವುದು ಸರಿಯಲ್ಲ ಎಂದರು.
ಕಳಸ ತಾಲ್ಲೂಕಿನ ವಿವಿಧಿ ಗ್ರಾಮಗಳ ಅತಿ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಮಳೆ ಮಾಪನ ಕೇಂದ್ರ ಸ್ಥಾಪಿಸುವ ಬಗ್ಗೆ ಪ್ರಮೋದ್ ಭಾರತಿಪುರ ಸಲಹೆ ನೀಡಿದರು. ಕಳೆದ ವರ್ಷ ಬೆಳೆ ವಿಮೆ ಸರಿಯಾಗಿ ಸಿಗದ ಕಾರಣ ಕೃಷಿಕರಿಗೆ ಬೆಳೆ ವಿಮೆ ಬಗ್ಗೆ ನಂಬಿಕೆ ಹೋಗುತ್ತಿದೆ ಎಂದು ಕಚಗಾನೆ ರಂಗನಾಥ್ ಪ್ರತಿಪಾದಿಸಿದರು.
ತೋಟಗಾರಿಕಾ ಇಲಾಖೆಯ ಹಿರಿಯ ನಿರ್ದೇಶಕಿ ಶ್ವೇತಾ, ಮಾತನಾಡಿ, ಮಳೆ ಪ್ರಮಾಣದ ಜೊತೆಗೆ ವಾತಾವರಣದಲ್ಲಿ ತೇವಾಂಶ ಹೆಚ್ಚಿದಾಗಲೂ ಬೆಳೆ ವಿಮೆ ಸಿಗುವ ಸಾಧ್ಯತೆ ಇದೆ. ಆ ಬಗ್ಗೆಯೂ ಹೆಚ್ಚಿನ ಅನುಕೂಲ ಆಗುವಂತೆ ಟರ್ಮ್ಶೀಟ್ ಸಿದ್ಧಪಡಿಸುವ ಭರವಸೆ ನೀಡಿದರು.
ಸಹಾಯಕ ತೋಟಗಾರಿಕಾ ಅಧಿಕಾರಿ ಸಾದಿಕಾ ಬಾನು ಮಾತನಾಡಿ, ಸಭೆಯಲ್ಲಿ ಕೇಳಿಬಂದ ಅಭಿಪ್ರಾಯಗಳ ಆಧಾರದ ಮೇಲೆ ಟರ್ಮ್ ಶೀಟ್ ರಚಿಸಲು ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು. ಕಾಳುಮೆಣಸಿನ ಬೆಳೆಗೆ ಹೆಕ್ಟೇರಿಗೆ ಕನಿಷ್ಟ 1 ಲಕ್ಷ ರೂಪಾಯಿ ಮೊತ್ತ ನಿಗದಿಪಡಿಸಬೇಕು ಎಂದು ಬೆಳೆಗಾರರು ಆಗ್ರಹಿಸಿದರು.
ಸಂಸೆ ಗ್ರಾಮಕ್ಕೆ ಈವರೆಗೂ ಬೆಳೆ ವಿಮೆ ಪಾವತಿ ಆಗಿಲ್ಲ ಎಂದು ಮಹೇಶ್ ಬಸರೀಕಲ್ಲು ಗಮನ ಸೆಳೆದರು. ಸದ್ಯದಲ್ಲೇ ವಿಮಾ ಮೊತ್ತ ಪಾವತಿ ಆಗಲಿದೆ ಎಂದು ನಿರ್ದೇಶಕಿ ಶ್ವೇತಾ ಮಾಹಿತಿ ನೀಡಿದರು.ಸಹಾಯಕ ತೋಟಗಾರಿಕಾ ಅಧಿಕಾರಿ ರಾಧೇಶ್, ಅನಿಲ್ ಡಿಸೋಜ ಭಾಗವಹಿಸಿದ್ದರು.
