ಕಳಸ: ಇಲ್ಲಿನ ಕಳಸ ಸಹಕಾರ ಸಂಘವು ಬೆಳೆಗಾರರಿಗೆ ಅಡಿಕೆ ಸಂಸ್ಕರಣೆ ಮಾಡಿಕೊಡುವ ಸ್ತುತ್ಯರ್ಹ ಕೆಲಸ ಆರಂಭಿಸಿದೆ.
ಕಚಗಾನೆಯಲ್ಲಿ ನಬಾರ್ಡ್ ಅನುದಾನದಲ್ಲಿ ಕಳಸ ಸಹಕಾರ ಸಂಘವು ಕಳೆದ 4 ವರ್ಷಗಳಿಂದ ನಡೆಸುತ್ತಿದ್ದ ಕಾಫಿ ಮತ್ತು ಅಡಿಕೆ ಸಂಸ್ಕರಣಾ ಘಟಕಗಳ ಕಾಮಗಾರಿ ಮುಗಿದಿದೆ.ಈ ಪೈಕಿ ಅಡಿಕೆ ಸಂಸ್ಕರಣಾ ಘಟಕವು ಕಳೆದ ತಿಂಗಳಿಂದ ಕಾರ್ಯಾರಂಭಿಸಿದೆ.
ಅಡಿಕೆ ಬೆಳೆಗಾರರು ಹಸಿ ಅಡಿಕೆಯನ್ನು ತಂದು ಇಲ್ಲಿನ ಸಂಸ್ಕರಣಾ ಘಟಕದಲ್ಲಿ ಸುಲಿಸಿಕೊಂಡು ತಮ್ಮ ಮನೆಗೆ ಕೊಂಡೊಯ್ಯಬಹುದು.ಅಲ್ಲಿ ಅವರು ಅಡಿಕೆ ಬೇಯಿಸಿಕೊಳ್ಳಬಹುದು.ಹಸಿ ಅಡಿಕೆ ಸುಲಿಯಲು ಸಹಕಾರ ಸಂಘವು 3 ರೂಪಾಯಿಯ ಅತ್ಯಂತ ಕಡಿಮೆ ಶುಲ್ಕ ವಿಧಿಸುತ್ತಿದೆ.

ಹೀಗೆ ಸುಲಿದ ಅಡಿಕೆಯನ್ನು ಇಲ್ಲೇ ಬೇಯಿಸಿಕೊಡುವ ಸೌಲಭ್ಯವೂ ಇದೆ.ಈ ಕೆಲಸಕ್ಕೆ ಕೆಜಿಗೆ 4 ರೂಪಾಯಿ ದರ ನಿಗದಿ ಮಾಡಲಾಗಿದೆ.ಇನ್ನು ಬೇಯಿಸಿದ ಅಡಿಕೆಯನ್ನು ಒಣಗಿಸಿ ಕೊಡುವ ವ್ಯವಸ್ಥೆಯನ್ನೂ ಸಂಘ ಮಾಡಿದೆ.ಈ ಕೆಲಸಕ್ಕೆ ಕೆಜಿಗೆ 5 ರೂಪಾಯಿ ಶುಲ್ಕ ವಿಧಿಸಲಾಗುತ್ತಿದೆ.
ಅನೇಕ ಬೆಳೆಗಾರರು ಈ ಸೌಲಭ್ಯ ಬಳಸಿಕೊಂಡು ಹಸಿ ಅಡಿಕೆ ಸುಲಿದು, ಬೇಯಿಸಿ, ಒಣಗಿಸಿಕೊಂಡು ತೆಗೆದುಕೊಂಡು ಹೋಗುತ್ತಿದ್ದಾರೆ. ‘ಕಾರ್ಮಿಕರ ಕೊರತೆಯಿಂದ ನಾವು ಮನೆಯಲ್ಲಿ ಅಡಿಕೆ ಬೇಯಿಸುವುದು ಬಿಟ್ಟು ಬಹಳ ವರ್ಷ ಆಗಿತ್ತು.ಪ್ರತಿ ವರ್ಷ ಹಸಿ ಅಡಿಕೆ ಮಾರಾಟ ಮಾಡುತ್ತಾ ಇದ್ದೆವು.ಈ ವರ್ಷ ಕಳಸ ಸಹಕಾರ ಸಂಘದಲ್ಲಿ ಅಡಿಕೆ ಸಂಸ್ಕರಣೆ ಮಾಡಿಸುತ್ತಿದ್ದೇವೆ.ಇದರಿಂದ ಬಹಳ ಅನುಕೂಲ ಆಗುತ್ತದೆ’ ಎಂದು ಮುನ್ನೂರುಪಾಲಿನ ಬೆಳೆಗಾರರೊಬ್ಬರು ಹೇಳುತ್ತಾರೆ.
50 ಲಕ್ಷ ರೂಪಾಯಿಗೂ ಹೆಚ್ಚು ವೆಚ್ಚದ ಅಡಿಕೆ ಸಂಸ್ಕರಣಾ ಘಟಕದ ಸಾಮಥ್ರ್ಯ ಗಂಟೆಗೆ ಕೆಜಿ.ಆದ್ದರಿಂದ ಘಟಕಕ್ಕೆ ಸತತ ಕೆಲಸ ಕೊಡಲು ನಾವು ಹಸಿ ಅಡಿಕೆ ಖರೀದಿ ಕೂಡ ಮಾಡುತ್ತಿದ್ದೇವೆ.ಗುಣಮಟ್ಟಕ್ಕೆ ತಕ್ಕಂತೆ ಕೆಜಿಗೆ 50ರಿಂದ 55 ರೂಪಾಯಿಗೆ ಹಸಿ ಅಡಿಕೆ ಖರೀದಿ ಮಾಡಿ ಸ್ಥಳದಲ್ಲೇ ಹಣ ಪಾವತಿ ಮಾಡುತ್ತಿದ್ದೇವೆ ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಬಲೇಶ್ವರ ಹೇಳುತ್ತಾರೆ.

ರಾಜ್ಯದ ಯಾವುದೇ ಊರಲ್ಲೂ ಸಹಕಾರಿ ತತ್ವದ ಮೇಲೆ ಇಂತಹ ಘಟಕ ಇಲ್ಲ.ಈ ವಿಚಾರ ಸಂಘಕ್ಕೆ ಹೇಗೆ ಹೊಳೆಯಿತು ಎಂದು ಸಂಘದ ಅಧ್ಯಕ್ಷರಾದ ಮಂಜಪ್ಪಯ್ಯ ಅವರು ‘ಪ್ರತಿ ವರ್ಷವೂ ಬೆಳೆಗಾರರು ಹಸಿ ಅಡಿಕೆ ಮಾರಾಟದಿಂದ ಬಹಳ ನಷ್ಟ ಅನುಭವಿಸುತ್ತಿದ್ದಾರೆ. ಅಡಿಕೆಗೆ ಬೆಲೆ ಬರುವುದು ಸಾಮಾನ್ಯವಾಗಿ ಮಾರ್ಚ್ ಕಳೆದ ನಂತರ.ಆದರೆ ಹಸಿ ಅಡಿಕೆ ಮಾರಾಟ ಮಾಡಿದ್ದರಿಂದ ಬೆಳೆಗಾರರ ಬಳಿ ಸಂಸ್ಕರಣೆ ಮಾಡಿದ ಅಡಿಕೆಯೇ ಇರುವುದಿಲ್ಲ.ಬೆಳೆಗಾರರ ಬಳಿ ಸಂಸ್ಕರಣೆ ಮಾಡಿದ ಅಡಿಕೆ ಉಳಿದರೆ ಅವರಿಗೆ ವರ್ಷದ ಯಾವುದೋ ಒಂದು ಕಾಲದಲ್ಲಿ ಗರಿಷ್ಟ ಬೆಲೆ ಸಿಗುತ್ತದೆ.ಬೆಳೆಗಾರರರಿಗೆ ಸಂಸ್ಕರಣೆಗೆ ಬೆಂಬಲ ನೀಡಿದರೆ ಅವರು ಆರ್ಥಿಕವಾಗಿ ಸದೃಢರಾಗುತ್ತಾರೆ ‘ ಎಂಬ ಸದುದ್ದೇಶದಿಂದ ಈ ಘಟಕ ಆರಂಭಿಸಿದ್ದೇವೆ ಎಂದು ಹೇಳಿದರು.
