ಕಳಸ:ರಾಜ್ಯದ ಖಾಸಗಿ ಬಸ್ ಉದ್ಯಮ ಸಂಕಷ್ಟದಲ್ಲಿದ್ದು ಈ ಬಾರಿಯ ಬಜೆಟ್ ನಲ್ಲಿ ಅನುಕೂಲ ಕಲ್ಪಿಸಬೇಕು ಎಂದು ರಾಜ್ಯ ಬಸ್ ಮಾಲೀಕರ ಸಂಘ ಆಗ್ರಹಿಸಿದೆ. ಖಾಸಗಿ ಬಸ್ ಗಳು ಕೂಡ ಅರ್ಹರಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ ಸೌಲಭ್ಯ ನೀಡುತ್ತಿದೆ. ಈ ಮೊತ್ತವನ್ನು ರಾಜ್ಯ ಸರ್ಕಾರ ಖಾಸಗಿ ಬಸ್ ಮಾಲೀಕರಿಗೆ ಮರುಪಾವತಿ ಮಾಡಬೇಕು ಎಂದು ಕರ್ನಾಟಕ ರಾಜ್ಯ ಮಜಲು ವಾಹನ ಬಸ್ ಮಾಲೀಕರ ಸಂಘವು ರಾಜ್ಯ ಸರ್ಕಾರವನ್ನು ಒತ್ತಾಯ ಮಾಡಿದೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿದ ಸಂಘದ ನಿಯೋಗ ಮನವಿ ಸಲ್ಲಿಸಿದ್ದು ಈ ಬಾರಿಯ ಬಜೆಟ್ನಲ್ಲಿ ಅನುದಾನ ಒದಗಿಸಬೇಕು ಎಂದು ಕೋರಿದೆ.
ರಾಜ್ಯದ 16 ಜಿಲ್ಲೆಗಳಲ್ಲಿ 7000 ಖಾಸಗಿ ಬಸ್ಗಳು ಸೇವೆ ನೀಡುತ್ತಿದ್ದು ರಸ್ತೆ ತೆರಿಗೆ, ಡೀಸೆಲ್ ಮೇಲಿನ ಸೆಸ್, ಬಿಡಿಭಾಗಗಳು, ಟೈರ್, ಜಿಎಸ್ಟಿ ರೂಪದಲ್ಲಿ ಸರ್ಕಾರಕ್ಕೆ ವಾರ್ಷಿಕ 8400 ರೂಪಾಯಿ ಹಣ ಸಂದಾಯ ಆಗುತ್ತಿದೆ.ಮಲೆನಾಡಿನ ಗುಡ್ಡಗಾಡು ಪ್ರದೇಶದಲ್ಲಿ ಸಂಚರಿಸುವ ಖಾಸಗಿ ಬಸ್ಸುಗಳು ನಿರ್ವಹಣೆಗಾಗಿ ಹೆಚ್ಚುವರಿ ವೆಚ್ಚ ಭರಿಸಬೇಕಾಗಿದೆ. ಅನೇಕ ಖಾಸಗಿ ಬಸ್ ಮಾಲೀಕರು ನಷ್ಟದಿಂದ ಉದ್ಯಮ ತೊರೆದಿದ್ದಾರೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಖಾಸಗಿ ಬಸ್ಗಳಲ್ಲಿ ವಿದ್ಯಾರ್ಥಿಗಳು, ಹಿರಿಯ ನಾಗರೀಕರು, ಪತ್ರಕರ್ತರು, ಕಲಾವಿದರು, ಅಂಗವಿಕಲರು ಮತ್ತು ಮಾಜಿ ಸೈನಿಕರಿಗೆ ಪಾಸ್ ಸೌಲಭ್ಯ ನೀಡಲಾಗಿದೆ. ಸರ್ಕಾರಿ ಬಸ್ಗಳು ಇಂತಹ ಪಾಸ್ ನೀಡಿದಾಗ ಅವರಿಗೆ ರಾಜ್ಯ ಸರ್ಕಾರ ಪಾಸ್ ಮೊತ್ತವನ್ನು ಮರುಪಾವತಿ ಮಾಡುತ್ತದೆ. ಇದೇ ಬಗೆಯಲ್ಲಿ ಖಾಸಗಿ ಬಸ್ಗಳಿಗೂ ಪಾಸ್ ಹಣವನ್ನು ಮರುಪಾವತಿ ಮಾಡಲು ಬಜೆಟ್ನಲ್ಲಿ ಅನುದಾನ ಒದಗಿಸಬೇಕು ಎಂದು ಬಸ್ ಮಾಲೀಕರ ಸಂಘ ಒತ್ತಾಯಿಸಿದೆ.
ರಾಜ್ಯ ಬಸ್ ಮಾಲೀಕರ ಸಂಘದ ಅಧ್ಯಕ್ಷ ಸುರೇಶ್ ನಾಯಕ್, ಕಾರ್ಯಾಧ್ಯಕ್ಷ ಲಿಂಗಾ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಕೆ.ಕೆ.ಬಾಲಕೃಷ್ಣ ಭಟ್, ಕಾರ್ಯದರ್ಶಿ ವಿಕ್ರಮ್, ಖಜಾಂಚಿ ನಾಗರಾಜ್ ನಿಯೋಗದಲ್ಲಿದ್ದರು.
