ಕಳಸ:ಕುದುರೆಮುಖ ಪಟ್ಟಣವು ಗಣಿಗಾರಿಕೆ ನಿಂತ ನಂತರ ಪಾಳು ಬಿದ್ದಿದೆ. ಕೋಟ್ಯಂತರ ಬೆಲೆ ಬಾಳುವ ಈ ನಗರದ ಮೂಲಸೌಕರ್ಯ ಬಳಸಿಕೊಳ್ಳುವ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಬಿಜೆಪಿ ಮುಖಂಡ ಡಾ.ಶಿವಪ್ರಸಾದ್ ದೂರಿದ್ದಾರೆ.
ಕುದುರೆಮುಖದಲ್ಲಿ ಪಶ್ಚಿಮ ಘಟ್ಟದ ಅಧ್ಯಯನ ಕೇಂದ್ರ ತೆರೆಯುವಂತೆ ಈಗಾಗಲೇ ಸಂಸದರ ಜೊತೆಗೂಡಿ ಕೇಂದ್ರ ಪರಿಸರ ಸಚಿವರನ್ನು ಭೇಟಿ ಮಾಡಲಾಗಿದೆ. ಅವರು ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸುವ ಸಲಹೆ ನೀಡಿದ್ದರು. ಅದರಂತೆ ಕುದುರೆಮುಖದಲ್ಲಿ ಅಧ್ಯಯನ ಕೇಂದ್ರ ತೆರೆಯಲು ಬೇಕಾದ ವ್ಯವಸ್ಥೆಗಳ ಬಗ್ಗೆ ಅಧ್ಯಯನ ನಡೆಸಿ 90 ಕೋಟಿ ರೂಪಾಯಿಯ ಪ್ರಸ್ತಾವನೆಯನ್ನು ಸಂಸದರ ಮೂಲಕ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಪ್ರಸ್ತಾವನೆ ಸಲ್ಲಿಸಿ 2 ತಿಂಗಳು ಕಳೆದರೂ ಸರ್ಕಾರಕ್ಕೆ ಈ ಬಗ್ಗೆ ಯಾವುದೇ ಆಸಕ್ತಿ ಇಲ್ಲವಾಗಿದೆ. ಈ ಬಗ್ಗೆ ಸಂಸದರು ಮತ್ತೆ ಕೇಂದ್ರ ಸಚಿವರ ಗಮನಕ್ಕೆ ತಂದಿದ್ದಾರೆ. ಕರ್ನಾಟಕದ ಅರಣ್ಯ ಸಚಿವರಿಗೆ ಪತ್ರವನ್ನೂ ಬರೆದಿದ್ದಾರೆ. ಕುದುರೆಮುಖದಲ್ಲಿ ಅರಣ್ಯ ಸಂಶೋಧನಾ ಕೇಂದ್ರ ಆರಂಭಿಸಿದರೆ ಆ ಪಟ್ಟಣ ಪುನರುಜ್ಜೀವನಗೊಳ್ಳುತ್ತದೆ.ಉದ್ಯೋಗಾವಕಾಶ ಸೃಷ್ಟಿ ಆಗುತ್ತದೆ.ಅಲ್ಲಿ ನಡೆಯುವ ಸಂಶೋಧನೆಗಳು ಮನುಕುಲಕ್ಕೆ ಲಾಭವನ್ನೂ ತರುತ್ತದೆ. ಆದ್ದರಿಂದ ಅಲ್ಲಿ ಸಂಶೋಧನಾ ಕೇಂದ್ರಕ್ಕೆ ರಾಜ್ಯ ಸರ್ಕಾರ ಕೂಡಲೇ ಒಪ್ಪಿಗೆ ನೀಡಬೇಕು ಎಂದು ಡಾ.ಶಿವಪ್ರಸಾದ್ ಆಗ್ರಹಿಸಿದ್ದಾರೆ.
