ಕಳಸ:ಇಲ್ಲಿನ ಕಳಸ ಕೃಷಿ ಮತ್ತು ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಜಿ.ಕೆ.ಮಂಜಪ್ಪಯ್ಯ ಅವರಿಗೆ ಕಳೆದ ಸಾಲಿನ ಸಾಧನೆಗಾಗಿ ಕರ್ನಾಟಕ ಸಹಕಾರ ಶಿರೋಮಣಿ ಪ್ರಶಸ್ತಿ ಸಂದಿದೆ.
ಏಷ್ಯಾನೆಟ್ ಸುವರ್ಣ ವಾಹಿನಿ ಮತ್ತು ಕನ್ನಡಪ್ರಭ ಸಂಸ್ಥೆಯು ರಾಜ್ಯದ ಅತ್ತುತ್ತಮ ಸಹಕಾರಿಗಳನ್ನು ಈ ಪ್ರತಿಷ್ಟಿತ ಪ್ರಶಸ್ತಿಗೆ ಆಯ್ಕೆ ಮಾಡುತ್ತಿದೆ. ಬೆಂಗಳೂರಿನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಈ ಸಂಸ್ಥೆಯ ಗಣ್ಯರು ಮಂಜಪ್ಪಯ್ಯ ದಂಪತಿಗೆ ಈ ಪ್ರಶಸ್ತಿ ಪ್ರದಾನ ಮಾಡಿದರು.
ಕಳೆದ 30 ವರ್ಷಗಳಿಂದ ಕಳಸ ಸಹಕಾರ ಸಂಘವನ್ನು ಮಂಜಪ್ಪಯ್ಯ ಮುನ್ನಡೆಸುತ್ತಿದ್ದು ಜಿಲ್ಲೆಯಲ್ಲೇ ಅಗ್ರಮಾನ್ಯ ಸಂಸ್ಥೆಯಾಗಿ ಬೆಳೆಸಿದ್ದಾರೆ. ವಾರ್ಷಿಕ 500 ಕೋಟಿ ರೂಪಾಯಿಗೂ ಹೆಚ್ಚು ವ್ಯವಹಾರ ಮಾಡುತ್ತಿರುವ ಈ ಸಂಸ್ಥೆ ಒಂದು ಕೋಟಿಗೂ ಹೆಚ್ಚು ಲಾಭವನ್ನು ಗಳಿಸುತ್ತಿದೆ.

ಕೃಷಿಕರಿಗೆ ಬೇಕಾದ ಬೆಳೆ ಸಾಲಗಳು, ದೀರ್ಘಾವಧಿ ಸಾಲಗಳು, ವ್ಯಾಪಾರಿ ಸಾಲಗಳು, ವಾಹನ ಸಾಲಗಳನ್ನು ಈ ಸಂಸ್ಥೆ ಸರಳ ಬಡ್ಡಿಯಲ್ಲಿ ನೀಡುತ್ತಿದೆ. ಕಳಸದಲ್ಲಿ ಮೂರು ಅಂತಸ್ತಿನ ಸುಸಜ್ಜಿತ ಕಟ್ಟಡ ಹೊಂದಿರುವ ಈ ಸಂಸ್ಥೆ ಕೋಟ್ಯಂತರ ರೂಪಾಯಿ ಸ್ವಂತ ಬಂಡವಾಳ ಹೊಂದಿದೆ.
ಕಳಸ ತಾಲ್ಲೂಕಿನ ಕೃಷಿಕರಿಗೆ ಬೇಕಾಗುವ ಎಲ್ಲ ಸಲಕರಣೆಗಳನ್ನೂ ಒಂದೇ ಸೂರಿನ ಅಡಿ ಸೂಪರ್ ಬಜಾರ್ ರೂಪದಲ್ಲಿ ಒದಗಿಸುತ್ತದೆ. ರಸಗೊಬ್ಬರಗಳ ವಿಚಾರದಲ್ಲಿ ಕಳಸ ಸಹಕಾರ ಸಂಘದ್ದು ಏಕಸ್ವಾಮ್ಯವೇ ಆಗಿದೆ.
ಕಚಗಾನೆಯಲ್ಲಿ ಸುಮಾರು 20 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಫಿ ಕ್ಯೂರಿಂಗ್ ವಕ್ರ್ಸ್ ಮತ್ತು ಅಡಿಕೆ ಸಂಸ್ಕರಣಾ ಸೌಲಭ್ಯ ಸ್ಥಾಪನೆ ಮಾಡಿದೆ. ಕಳಸ ತಾಲ್ಲೂಕಿನ ಎಲ್ಲ ಕೃಷಿಕರಿಗೂ ನಾನಾ ಬಗೆಯ ಅನುಕೂಲ ಕಲ್ಪಿಸುವ ಸಹಕಾರ ಸಂಘವಾಗಿ ಕಳಸ ಸಹಕಾರ ಸಂಘ ಮನೆಮಾತಾಗಿದೆ.
ಸಹಕಾರ ಸಂಘದ ಈ ಎಲ್ಲ ಸೌಲಭ್ಯ ಮತ್ತು ಸಾಧನೆಯ ಹಿಂದೆ ಅಧ್ಯಕ್ಷ ಮಂಜಪ್ಪಯ್ಯ ಅವರ ಅವಿರತ ಶ್ರಮ ಮತ್ತು ಬದ್ಧತೆ ಇದೆ. ಆದ್ದರಿಂದಲೇ ಅವರನ್ನು ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳು ಅರಸಿಕೊಂಡು ಬರುತ್ತಿವೆ ಎಂಬುದು ಕಳಸದ ನಾಗರೀಕರ ಅಭಿಪ್ರಾಯ ಆಗಿದೆ.
