ಕಳಸ:ಪಟ್ಟಣದಲ್ಲಿ ಸೋಮವಾರ ಕಳಸ ರೈತ ಕಾರ್ಮಿಕ ಹಿತರಕ್ಷಣಾ ಸಮಿತಿಯು ಅರಣ್ಯ ಕಾಯ್ದೆ ವಿರುದ್ಧ ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜನರ ಮನವಿ ಸ್ವೀಕರಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಕೃಷಿಕರ ಆತಂಕ ಮತ್ತು ಅನಿಶ್ಚಿತತೆ ಹೋಗಲಾಡಿಸುವ ಯತ್ನ ಮಾಡಿದರು.
ಸೆಕ್ಷನ್ 4 ಅನ್ವಯ ಗುರುತಿಸಿದ ಭೂಮಿಯಲ್ಲಿ ಕೃಷಿಕರು ಇದ್ದಲ್ಲಿ ಅವರ ಹಕ್ಕು ಮಾನ್ಯತೆ ಮಾಡಲು ದಾಖಲೆಗಳನ್ನು ಕೇಳಿದ್ದೆವು. ಸೂಕ್ತ ದಾಖಲೆ ಇಲ್ಲದೆ ವಾಸ ಮಾಡುತ್ತಿದ್ದವರನ್ನೂ ಕೂಡ ಪರಿಗಣಿಸಿ ಉಳಿದ ಭೂಮಿಯನ್ನು ಮಾತ್ರ ಮೀಸಲು ಅರಣ್ಯ ಎಂದು ಅಧಿಸೂಚನೆ ಹೊರಡಿಸಲಾಗುತ್ತದೆ. ಈ ಬಗ್ಗೆ ಯಾರಿಗೂ ಆತಂಕ ಬೇಡ ಎಂದರು.
ಜಿಲ್ಲಾಧಿಕಾರಿಗಳ ಮೀಸಲು ಅರಣ್ಯದ ವ್ಯಾಪ್ತಿಯ ಗಡಿ ಬಗ್ಗೆ ಟಾಸ್ಕ್ ಫೋರ್ಸ್ ಸಮೀಕ್ಷೆ ನಡೆಸುತ್ತಿದೆ. ಜೂನ್ ಅಂತ್ಯದ ಒಳಗೆ 185 ಗ್ರಾಮಗಳ ಎಲ್ಲ ಭೂಮಿ ಸಮೀಕ್ಷೆ ಮುಗಿಸಲಿದೆ.ಪರಿಭಾವಿತ ಅರಣ್ಯದಲ್ಲಿ ಕೂಡ ಕೃಷಿಕರು ಇದ್ದರೆ ಮತ್ತೊಮ್ಮೆ ಪರಿಶೀಲಸಿ ಪಟ್ಟಿ ತಯಾರಿಸಲು ಸರ್ಕಾರದಿಂದ ಸೂಚನೆ ಬಂದಿದೆ. ಆದ್ದರಿಂದ 3 ಎಕರೆವರೆಗೆ ಕೃಷಿ ಮಾಡಿರುವ ಜನರು ಯಾವುದೇ ದಾಖಲೆ ಇಲ್ಲದಿದರೂ ಒತ್ತುವರಿ ಖುಲ್ಲಾ ಬಗ್ಗೆ ಆತಂಕಪಡುವುದು ಬೇಡ.ಸದ್ಯಕ್ಕೆ ದೊಡ್ಡ ಒತ್ತುವರಿದಾರರ ಬಗ್ಗೆ ಮಾತ್ರ ಗಮನ ಹರಿಸಲಾಗುತ್ತಿದೆ ಎಂದರು.
ಇದಕ್ಕೂ ಮುನ್ನ ಮಾತನಾಡಿದ ಕರ್ನಾಟಕ ಜನಶಕ್ತಿ ಸಂಘದ ಸಂಚಾಲಕ ಕೆ.ಎಲ್.ಅಶೋಕ್, ಅರಣ್ಯ ಇಲಾಖೆಗೆ ಪರಿಸರ ಕಾಳಜಿ ಇದ್ದರೆ ಒಂದೆರಡು ಎಕರೆ ಕೃಷಿ ಮಾಡಿರುವ ಬಡವರ ಭೂಮಿ ಬಿಟ್ಟು ನೂರಾರು ಎಕರೆ ಒತ್ತುವರಿ ಮಾಡಿರುವವರ ಭೂಮಿ ಖುಲ್ಲಾ ಮಾಡಲಿ ಎಂದು ಸವಾಲು ಹಾಕಿದರು.
ಮಲೆನಾಡಿನಲ್ಲಿ ರಾಷ್ಟ್ರೀಯ ಉದ್ಯಾನ, ಹುಲಿ ಯೋಜನೆ, ಮೀಸಲು ಅರಣ್ಯ, ಆನೆ ಬಿಡಾರ ಮುಂತಾದ ಯೋಜನೆಗಳ ಭಾರ ಹೆಚ್ಚಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಸಂವಹನ ಕೊರತೆಯಿಂದ ಇಲ್ಲಿನ ಜನರು ಅನಿಶ್ಚಿತತೆ ಮತ್ತು ಆತಂಕದಲ್ಲಿ ಬದುಕುವಂತಾಗಿದೆ.ಸರ್ಕಾರೇತರ ಸಂಸ್ಥೆಗಳ ಹುನ್ನಾರದಿಂದ ಮಲೆನಾಡನ್ನು ಖಾಲಿ ಮಾಡುವ ಯತ್ನಕ್ಕೆ ಅರಣ್ಯ ಇಲಾಖೆ ಕೈ ಜೋಡಿಸುತ್ತಿದೆ ಎಂದು ಅಶೋಕ್ ಆರೋಪಿಸಿದರು.
ಕರ್ನಾಟಕದಲ್ಲಿ ಫಾಂ 50,53 ಮತ್ತು 57ರಲ್ಲಿ ಅರ್ಜಿ ಸಲ್ಲಿಸಿದ 50 ಲಕ್ಷ ಕುಟುಂಬಗಳು ಇವೆ.ಅರಣ್ಯ ಉಳಿಸಿ ಬೆಳೆಸಿದ 2 ಕೋಟಿ ಜನರ ಬದುಕು ಅತಂತ್ರವಾಗಿರುವ ಬಗ್ಗೆ ಕಂದಾಯ ಸಚಿವರ ಗಮನ ಸೆಳೆದಿದ್ದೇವೆ ಎಂದರು.
ಕೆ.ಎಲ್.ವಾಸು ಮಾತನಾಡಿ, ಜನರಿಗೆ ಅನುಕೂಲ ತರಬೇಕಿದ್ದ ಈ ನೆಲದ ಕಾನೂನುಗಳು ಜನವಿರೋಧಿ ಆಗುತ್ತಿರುವುದು ದುರದೃಷ್ಟಕರ ಎಂದರು. ಶ್ರೀಕಾಂತ್ ಮಾತನಾಡಿ, ಕೃಷಿಕರ ವಿರುದ್ಧದ ಅರಣ್ಯ ಇಲಾಖೆ ಕ್ರಮ ಕಾರ್ಮಿಕರಿಗೂ ಬಿಸಿ ತಟ್ಟುತ್ತದೆ ಎಂದರು. ಜ್ವಾನಲಯ್ಯ ಮಾತನಾಡಿ, ವನ್ಯಜೀವಿಗಳ ಉಪಟಳದಿಂದ ಕೃಷಿಯೇ ಅಸಾಧ್ಯವಾಗಿದೆ.ಅರಣ್ಯ ಕಾಯ್ದೆ ವಿರುದ್ಧ ದೊಡ್ಡ ಹೋರಾಟ ಆಗಬೇಕಿದೆ ಎಂದರು.
ವಕೀಲ ಅನಂತೇಶ್, ಮಾತನಾಡಿ, ಬ್ರಿಟಿಷರ ಕಾಲದಲ್ಲಿ ರೂಪುಗೊಂಡ ಅರಣ್ಯ ಕಾಯ್ದೆಯಲ್ಲಿ ಲೋಪದೋಷ ಇದೆ.ಅದರ ತಿದ್ದುಪಡಿ ಆಗಬೇಕು ಎಂದರು. ರೈತ ಸಂಘದ ಕಾರ್ಯದರ್ಶಿ ರಾಜೇಶ್ ಮಾತನಾಡಿ, ಎಲ್ಲ ಕಂದಾಯ ಭೂಮಿಯನ್ನು ಅರಣ್ಯ ಮಾಡುವ ಉದ್ದೇಶ ಏನು. ನಾವು ನೆಮ್ಮದಿಯಿಂದ ಬದುಕುವುದು ಬೇಡವಾ ಎಂದು ಪ್ರಶ್ನಿಸಿದರು. ರೈತ ಸಂಘದ ಸವಿಂಜಯ ಮಾತನಾಡಿ, ರೈತರಿಗೆ ನೀಡಿರುವ ನೋಟಿಸ್ ಅನ್ನು ಕೂಡಲೇ ಅರಣ್ಯ ಇಲಾಖೆ ಹಿಂದಕ್ಕೆ ಪಡೆಯಬೇಕು ಎಂದರು.

ಹೋರಾಟ ಸಮಿತಿ ಅಧ್ಯಕ್ಷ ಸುರೇಶ್ ಭಟ್ ಮಾತನಾಡಿ, ಮಲೆನಾಡಿನಿಂದ ಜನರನ್ನೆಲ್ಲಾ ಖಾಲಿ ಮಾಡಿಸಿದ್ರೂ ಅರಣ್ಯದ ಸಮಸ್ಯೆಗಳು ಸರಿ ಆಗುವುದಿಲ್ಲ. ಮಲೆನಾಡಿನಲ್ಲಿ ಅರಣ್ಯದ ವಿಸ್ತೀರ್ಣ ಹೆಚ್ಚುತ್ತಿದ್ದು, ವನ್ಯಪ್ರಾಣಿಗಳ ಉಪಟಳ ಹೆಚ್ಚುತ್ತಿದೆ. ಬಯಲು ಸೀಮೆಯಲ್ಲಿ ಅರಣ್ಯ ಬೆಳೆಸುವ ಬಗ್ಗೆ ಇಲಾಖೆ ಕೆಲಸ ಮಾಡಲಿ ಎಂದ ಸಲಹೆ ನೀಡಿದರು.ಕಾಂಗ್ರೆಸ್ ಮುಖಂಡ ಶ್ರೇಣಿಕ ಮಾತನಾಡಿ, ಕೃಷಿಕರ ಸಮಸ್ಯೆ ಪರಿಹರಿಸಲು ಸರ್ಕಾರ ಸೂಕ್ತ ಕ್ರಮ ವಹಿಸುತ್ತಿದೆ ಎಂದರು.

ಇದಕ್ಕೂ ಮುನ್ನ ಕೃಷಿಕರು ಪಟ್ಟಣದ ಕಳಸೇಶ್ವರ ದೇವಸ್ಥಾನದಿಂದ ವಲಯ ಅರಣ್ಯಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.ಕೃಷಿಕರು ಅರಣ್ಯ ಕಾಯ್ದೆಗಳ ವಿರುದ್ಧ ಘೋಷಣೆ ಕೂಗಿದರು.
