ಕಳಸ:ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್. ಕೆ. ಮೇಗಲ್ ಗ್ರಾಮದ ಕೊಣೆಗೋಡು ಪ್ರದೇಶದಲ್ಲಿ 50 ಲಕ್ಷ ವೆಚ್ಚದಲ್ಲಿ ಶಾಶ್ವತ ಸೇತುವೆ ನಿರ್ಮಾಣ ಆಗಿದ್ದು ಗ್ರಾಮಸ್ಥರಲ್ಲಿ ಹರ್ಷ ತಂದಿದೆ.
ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಕುಟುಂಬಗಳು ವಾಸಿಸುತ್ತಿದ್ದು ಅನೇಕ ವರ್ಷಗಳಿಂದ ಸೇತವೆಯ ಬೇಡಿಕೆ ಇತ್ತು. ಎರಡು ವರ್ಷದ ಹಿಂದೆ ಮಳೆಗಾಲದಲ್ಲಿ ಸಂಪರ್ಕ ರಸ್ತೆ ಇಲ್ಲದೆ ಗ್ರಾಮದ ಯುವಕರೊಬ್ಬರನ್ನು ಹೊತ್ತುಕೊಂಡು ಕಳಸಕ್ಕೆ ಹೋದರೂ ಸಕಾಲದಲ್ಲಿ ಶುಶ್ರೂಷೆ ಸಿಗದೆ ಸಾವನ್ನಪ್ಪಿದ್ದರು. ಆ ವೇಳೆಗೆ ಜನಪ್ರತಿನಿಧಿಗಳ ವಿರುದ್ಧ ತೀವ್ರ ಆಕ್ರೋಶ ಕಂಡು ಬಂದಿತ್ತು.

ಆನಂತರದ ದಿನಗಳಲ್ಲಿ ಆಗಿನ ಉಪಲೋಕಾಯುಕ್ತರು ಕೂಡ ಗ್ರಾಮಕ್ಕೆ ಭೇಟಿ ನೀಡಿ ಸೇತುವೆಯ ಅಗತ್ಯದ ಬಗ್ಗೆ ಪರಿಶೀಲನೆ ನಡೆಸಿದ್ದರು. ಶಾಸಕಿ ನಯನಾ ಮೋಟಮ್ಮ ಗ್ರಾಮಕ್ಕೆ ಭೇಟಿ ನೀಡಿ ಶಾಶ್ವತ ಸೇತುವೆಯ ಭರವಸೆ ನೀಡಿದ್ದರು.
ಗ್ರಾಮದಲ್ಲಿ ಬೆರಳೆಣಿಕೆಯಷ್ಟು ಮನೆಗಳೇ ಇದ್ದರೂ ಇಲ್ಲಿಗೆ ಶಾಸಕಿ ನಯನಾ ಮೋಟಮ್ಮ 50 ಲಕ್ಷದ ಸೇತುವೆ ಹಾಗೂ ಮತ್ತೊಂದು ಕಾಲು ಸೇತುವೆ ಮಾಡಿಕೊಟ್ಟಿದ್ದಾರೆ. ನಮಗೆ ತುಂಬಾ ಸಂತೋಷ ಆಗಿದೆ.ಇನ್ನು ಮಳೆಗಾಲದಲ್ಲೂ ನಾವು ನಿಶ್ಚಿಂತೆಯಿಂದ ಇರಬಹುದು ಎಂದು ಗ್ರಾಮದ ಕಾರ್ಮಿಕ ಮಹಿಳೆ ಸುಜಾತ ಹೇಳುತ್ತಾರೆ.
