ಕಳಸ:ಭದ್ರಾ ನದಿಯಲ್ಲಿ ಅಲ್ಲಲ್ಲಿ ಇರುವ ಸೆಳೆತ ಮತ್ತು ಅಪಾಯಕಾರಿ ಗುಂಡಿಗಳ ಬಗ್ಗೆ ಅರಿವು ಇಲ್ಲದೆ ಪ್ರತಿವರ್ಷವೂ ಅನೇಕ ವಲಸೆ ಕಾರ್ಮಿಕರು ಮತ್ತು ಪ್ರವಾಸಿಗರು ಬಲಿಯಾಗುತ್ತಿದ್ದಾರೆ.
ಬಾಳೆಹೊಳೆ ಸಮೀಪದಲ್ಲಿ ಭದ್ರಾ ನದಿಗೆ ಬಟ್ಟೆ ತೊಳೆಯಲು ಹೋಗಿ ಶನಿವಾರ ಮುಳುಗಿದ್ದ ಇಬ್ಬರು ಯುವಕರ ಶವ ಭಾನುವಾರ ಸಿಕ್ಕಿದೆ.ಬಾಳೆಹೊಳೆ ಸಮೀಪದ ಕಾಫಿ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ತನ್ನ ಅಕ್ಕನ ಮನೆಗೆ ಕೊಡಗು ಜಿಲ್ಲೆಯಿಂದ ಅಭಿಷೇಕ್(27) ಮತ್ತು ಯೋಗೀಶ್(17) ಬಂದಿದ್ದರು.
ಶನಿವಾರ ತೋಟದ ಸಮೀಪದ ಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಈ ಯುವಕರು ನಾಪತ್ತೆಯಾಗಿದ್ದರು. ಶನಿವಾರ ಸಂಜೆವರೆಗೂ ಅಗ್ನಿಶಾಮಕ ದಳ ಮತ್ತು ಕಳಸ ಪೊಲೀಸರು ಹುಡುಕಾಟ ನಡೆಸಿದ್ದರೂ ಯುವಕರ ಶವ ಸಿಕ್ಕಿರಲಿಲ್ಲ.

ಭಾನುವಾರ ಮಧ್ಯಾಹ್ನದ ವೇಳೆಗೆ ಶವ ಸಿಕ್ಕಿದ್ದು ನದಿ ದಡದಲ್ಲಿ ಮೃತರ ಸಂಬಂಧಿಕರ ಆಕ್ರಂದನ ಕೇಳಿಬಂತು. ಮರಣೋತ್ತರ ಪರೀಕ್ಷೆ ನಂತರ ಶವವನ್ನು ಕುಟುಂಬಸ್ಥರಿಗೆ ನೀಡಲಾಯಿತು. ಕಳಸ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಭದ್ರಾ ನದಿಯ ಉದ್ದಕ್ಕೂ ಅಲ್ಲಲ್ಲಿ ‘ನದಿಯಲ್ಲಿ ಈಜುವುದು ಅಪಾಯ’ ಎಂಬ ಫಲಕಗಳನ್ನು ಅಳವಡಿಸಬೇಕು ಎಂಬ ಒತ್ತಾಯ ಸ್ಥಳೀಯರಿಂದ ಕೇಳಿಬಂದಿದೆ. ಈ ಬಗ್ಗೆ ಆಯಾ ಗ್ರಾಮ ಪಂಚಾಯಿತಿಗಳು ಗಮನ ಹರಿಸಬೇಕಾಗಿದೆ.
