ಕಳಸ:ಕಳಸ ತಾಲ್ಲೂಕಿನಲ್ಲಿ ಪರಿಸರ ಮತ್ತು ಧಾರ್ಮಿಕ ಪ್ರವಾಸೋದ್ಯಮದ ಅಭಿವೃದ್ಧಿಗೆ ಆಗಬೇಕಾದ ಕೆಲಸಗಳ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕಳಸ ತಾಲ್ಲೂಕು ಪ್ರವಾಸೋದ್ಯಮ ವೇದಿಕೆಯು ಮನವಿ ಸಲ್ಲಿಸಿದೆ.
ಕಳಸ ತಾಲೂಕು ಪ್ರಕೃತಿ ಸೌಂದರ್ಯ, ಧಾರ್ಮಿಕ ಕ್ಷೇತ್ರಗಳು ಮತ್ತು ಐತಿಹಾಸಿಕ ಸ್ಥಳಗಳಿಗೆ ಹೆಸರಾಗಿದ್ದು ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳು ಇವೆ. ಪ್ರತಿ ವರ್ಷ ಕಳಸಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು ಮೂಲ ಸೌಕರ್ಯಗಳು ಕೂಡ ಹೆಚ್ಚಬೇಕು ಎಂದು ವೇದಿಕೆ ಮನವಿಯಲ್ಲಿ ಬೊಟ್ಟು ಮಾಡಿದೆ.

ತಾಲ್ಲೂಕಿನ ಪ್ರಮುಖ ಪ್ರವಾಸಿ ತಾಣಗಳಾದ ಕುದುರೆಮುಖ, ಹೊರನಾಡು, ನೇತ್ರಾವತಿ, ಕ್ಯಾತನಮಕ್ಕಿ, ಸೂರುಮನೆ ಜಲಪಾತ, ಕರ್ಸಿ ಗುಡ್ಡ, ಮೇರುತಿ ಪರ್ವತ, ಅಜ್ಜಿ ಗುಡ್ಡ, ಅಂಬಾತೀರ್ಥ ಮತ್ತಿತರ ಪ್ರದೇಶಗಳಿಗೆ ತಲುಪುವ ರಸ್ತೆಗಳ ಅಭಿವೃದ್ಧಿ ತುರ್ತಾಗಿ ಆಗಬೇಕು ಎಂದು ಗಮನ ಸೆಳೆಯಲಾಗಿದೆ.
ಕಳಸವನ್ನು ಕೇಂದ್ರವಾಗಿಟ್ಟುಕೊಂಡು ಹೂವಿನ ಉದ್ಯಾನ ಮತ್ತು ಜಲಕ್ರೀಡೆಗಳನ್ನು ಆರಂಭಿಸಬೇಕು. ಇದರಿಂದ ಬಹಳಷ್ಟು ಉದ್ಯೋಗಾವಕಾಶ ಮತ್ತು ಪ್ರವಾಸಿಗರಿಗೆ ಆಕರ್ಷಣೆ ಆಗುತ್ತದೆ ಎಂದು ಮನವಿಯಲ್ಲಿ ಕೋರಲಾಗಿದೆ.
ತಾಲ್ಲೂಕಿನಲ್ಲಿ ರ್ಯಾಫ್ಟಿಂಗ್, ಕಯಾಕಿಂಗ್, ಝಿಪ್ ಲೈನ್, ರೋಪ್ ಆಕ್ಟಿವಿಟೀಸ್ ಮತ್ತಿತರ ಸಾಹಸ ಕ್ರೀಡೆಗಳಿಗೆ ಉತ್ತೇಜನ ನೀಡಬೇಕು. ಕಳಸ ತಾಲ್ಲೂಕಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ವಾಹನ ನಿಲುಗಡೆ , ಶೌಚಾಲಯ, ಕುಡಿಯುವ ನೀರು, ಅಲ್ಲಲ್ಲಿ ಸೂಚನಾ ಫಲಕಗಳು, ಸುರಕ್ಷತಾ ವ್ಯವಸ್ಥೆಗಳು ಮತ್ತಿತರ ಮೂಲ ಸೌಕರ್ಯ ಸ್ಥಾಪಿಸಬೇಕು ಎಂದೂ ಮುಖ್ಯಮಂತ್ರಿಗಳ ಗಮನ ಸೆಳೆಯಲಾಯಿತು.
ಕಳಸದಲ್ಲಿ ಪ್ರವಾಸಿ ಮಾಹಿತಿ ಕೇಂದ್ರ ತೆರೆದು ತಾಲ್ಲೂಕಿನ ಎಲ್ಲ ಪ್ರವಾಸಿ ತಾಣಗಳ ಬಗ್ಗೆ, ಚಾರಣಗಳ ಬಗ್ಗೆ, ಮಾರ್ಗದರ್ಶಿಗಳ ಬಗ್ಗೆ, ಜೀಪ್ ಸೌಲಭ್ಯದ ಬಗ್ಗೆ ಮತ್ತು ಹೋಂಸ್ಟೇ, ರೆಸಾರ್ಟ್ಗಳ ಬಗ್ಗೆ ಸಮಗ್ರ ಮಾಹಿತಿ ಕೊಡಬೇಕು.

ಕಳಸ ತಾಲ್ಲೂಕಿನಲ್ಲಿ ಪ್ರವಾಸೋದ್ಯಮ ಸಮಗ್ರ ಅಭಿವೃದ್ಧಿ ಆದಲ್ಲಿ ಸ್ಥಳೀಯ ಆರ್ಥಿಕತೆಗೆ ಮಹತ್ತರ ಕೊಡುಗೆ ಆಗಲಿದೆ. ಪಟ್ಟಣಗಳಿಗೆ ವಲಸೆ ತಪ್ಪಲಿದೆ. ಈ ಎಲ್ಲ ಅಂಶಗಳ ಬಗ್ಗೆ ತಾಂತ್ರಿಕ ಅಧ್ಯಯನ ನಡೆಸಿ ಅಗತ್ಯ ಸೌಲಭ್ಯಗಳ ಅನುಷ್ಟಾನ ಮಾಡಬೇಕು ಎಂದು ಮುಖ್ಯಮಂತ್ರಿಗೆ ನೀಡಿದ ಮನವಿಯಲ್ಲಿ ತಿಳಿಸಲಾಯಿತು. ಕಳಸ ತಾಲ್ಲೂಕು ಪ್ರವಾಸೋದ್ಯಮ ವೇದಿಕೆಯ ಅಧ್ಯಕ್ಷ ಸತೀಶ್ ಜೈನ್, ಕಾರ್ಯದರ್ಶಿ ಚಂದ್ರಮೋಹನ್, ಸಂಯೋಜಕ ಸುಜನ್ ಜೈನ್ ಮನವಿಯನ್ನು ಶಾಸಕಿ ನಯನಾ ಮೋಟಮ್ಮ ಮೂಲಕ ಮುಖ್ಯಮಂತ್ರಿಗಳಿಗೆ ಒಪ್ಪಿಸಿದರು.
