ಕಳಸ:ತಾಯಿ ಜಲ್ಲಿ ಹಾಕಿಸಿದ್ದ ರಸ್ತೆಗೆ ಮಗಳು ಕಾಂಕ್ರೀಟೀಕರಣ ಮಾಡುವ ವಿಚಾರ ಸ್ವಾರಸ್ಯಕರ ಆದರೂ ಸತ್ಯ. 25 ವರ್ಷದ ಹಿಂದೆ ಮಾಜಿ ಸಚಿವೆ ಮೋಟಮ್ಮ ಹೆಮ್ಮಕ್ಕಿ ಗ್ರಾಮದ ನಾಗಸಂಪಿಗೆಮಕ್ಕಿ ಪ್ರದೇಶಕ್ಕೆ ತೆರಳುವ ರಸ್ತೆಗೆ ಜಲ್ಲಿ ಹಾಕಿಸಿದ್ದರು. 25 ವರ್ಷಗಳ ನಂತರ ಅದೇ ರಸ್ತೆಯ ಅಭಿವೃದ್ಧಿಗೆ ಶಾಸಕಿ ನಯನಾ ಮೋಟಮ್ಮ 20 ಲಕ್ಷ ರೂಪಾಯಿ ಅನುದಾನ ಕೊಟ್ಟಿದ್ದು ಸರ್ವಋತು ರಸ್ತೆ ನಿರ್ಮಾಣಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಈ ಪ್ರದೇಶದ ರಸ್ತೆ ಅಭಿವೃದ್ಧಿಗೆ ಬಹಳ ವರ್ಷಗಳಿಂದ ಬೇಡಿಕೆ ಇತ್ತು.ಕಳೆದ ಬಾರಿಯ ಮತದಾನದ ಸಂದರ್ಭದಲ್ಲಿ ಜನರು ಚುನಾವಣಾ ಬಹಿಷ್ಕಾರದ ಬೆದರಿಕೆ ಕೂಡ ಹಾಕಿದ್ದರು. ಶಾಸಕಿ ನಯನಾ ಮೋಟಮ್ಮ ಭರವಸೆ ನೀಡಿದಂತೆ ಈ ರಸ್ತೆಗೆ 30 ಲಕ್ಷ ರೂಪಾಯಿ ಅನುದಾನ ಒದಗಿಸಿದ್ದಾರೆ.

ಕಳಸ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೇಣಿಕ, ಮುಖಂಡರಾದ ಪ್ರಭಾಕರ್, ಭಾಸ್ಕರ್, ವಿಶ್ವನಾಥ್ ಮತ್ತಿತರರು ಭಾಗವಹಿಸಿದ್ದರು. ಮಾಜಿ ಸಚಿವೆ ಮೋಟಮ್ಮ 25 ವರ್ಷದ ಹಿಂದೆ ಸ್ಥಳೀಯ ಮುಖಂಡರ ಮನವಿ ಮೇರೆಗೆ ನಮ್ಮ ಊರಿನ ರಸ್ತೆ ಕಾಮಗಾರಿಗೆ ಚಾಲನೆ ಕೊಟ್ಟಿದ್ದರು. ಆನಂತರದ 25 ವರ್ಷ ನಮ್ಮ ರಸ್ತೆಯ ಅಭಿವೃದ್ಧಿ ಕಡೆಗಣಿಸಲಾಗಿತ್ತು. ಇದೀಗ ಮೋಟಮ್ಮ ಅವರ ಮಗಳೇ ಶಾಸಕರಾಗಿ ರಸ್ತೆ ಕಾಮಗಾರಿ ಪೂರ್ಣಗೊಳಿಸುತ್ತಿದ್ದಾರೆ. ಇದು ನಮ್ಮ ಊರಿನ ಎಲ್ಲ ಗ್ರಾಮಸ್ಥರಿಗೂ ಸಂತಸದ ಸಂಗತಿ ಎಂದು ನಾಗಸಂಪಿಗೆಮಕ್ಕಿ ಪ್ರದೇಶದ ಯುವಕ ಪ್ರವೀಣ್ ಹೇಳಿದರು.
