ಕಳಸ:ಮೆಣಸಿನಹಾಡ್ಯ ಗ್ರಾಮದ ಹೋರಿಕೊಂಡ ಪ್ರದೇಶಕ್ಕೆ ತೆರಳುವ ರಸ್ತೆ ಮತ್ತು ಸೇತುವೆ ಕಾಮಗಾರಿ ವಿಳಂಬ ಆಗಿದೆ ಎಂದು ಆರೋಪಿಸಿ ಮೆಣಸಿನಹಾಡ್ಯ ಗ್ರಾಮಸ್ಥರು ಮಂಗಳವಾರ ಮೆಣಸಿಹಾಡ್ಯದಲ್ಲಿ ಹೊರನಾಡು-ಶೃಂಗೇರಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಕಳೆದ ಏಪ್ರಿಲ್ನಲ್ಲಿ ಆರಂಭವಾದ ಸೇತುವೆ ಕಾಮಗಾರಿ ಕುಂಟುತ್ತಾ ಸಾಗಿ ಕಳೆದ 5 ತಿಂಗಳಿನಿಂದ ಸ್ಥಗಿತವಾಗಿದೆ. ಹೋರಿಕೊಂಡ ಪ್ರದೇಶದ ಗ್ರಾಮಸ್ಥರಿಗೆ ಸಂಪರ್ಕ ರಸ್ತೆಯೂ ಇಲ್ಲವಾಗಿದೆ. ಅಲ್ಲಿನ ಕೃಷಿಕರು ಕೃಷಿ ಸಲಕರಣೆ, ಗೊಬ್ಬರವನ್ನು ತಲೆ ಮೇಲೆ ಹೊತ್ತುಕೊಂಡು ಸಾಗುವಂತಾಗಿದೆ. ರೋಗಿಗಳನ್ನು ಕುರ್ಚಿ ಕಟ್ಟಿಕೊಂಡು ಕರೆತರಬೇಕಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಸ್ಥಳಕ್ಕೆ ಬಂದ ಪಂಚಾಯತ್ರಾಜ್ ಕಿರಿಯ ಎಂಜಿನಿಯರ್ ಹಾಗೂ ಗುತಿಗೆದಾರರನ್ನು ಹಳ್ಳಿಗರು ತರಾಟೆಗೆ ತೆಗೆದುಕೊಂಡರು. ಮಳೆ ಇದ್ದ ಕಾರಣ ಕಾಮಗಾರಿ ಆರಂಭಿಸಿಲ್ಲ ಎಂದು ಗುತ್ತಿಗೆದಾರ ನೆಪ ಹೇಳಿದಾಗ ಗ್ರಾಮಸ್ಥರು ಕುಪಿತಗೊಂಡರು. ಕಳೆದ 10 ವರ್ಷದಲ್ಲೇ ಈ ವರ್ಷ ಮಳೆ ಕಡಿಮೆ ಇದೆ. ಆದರೂ ಕಾಮಗಾರಿ ನಡೆಸಲು ಯಾಕೆ ಆಸಕ್ತಿ ತೋರುತ್ತಿಲ್ಲ ಎಂದು ಪ್ರಶ್ನಿಸಿದರು.

ಕಾರ್ಮಿಕರ ಸಮಸ್ಯೆ ಇದ್ದು 2 ದಿನದಲ್ಲೇ ಕಾಮಗಾರಿ ಆರಂಭಿಸುವುದಾಗಿ ಎಂಜಿನಿಯರ್ ಹೇಳಿದರು. ಆದರೆ ಇದಕ್ಕೆ ಒಪ್ಪದ ಹಳ್ಳಿಗರು ಅರ್ಧ ಗಂಟೆ ರಸ್ತೆ ತಡೆ ಮಾಡಿದರು. ಇದರಿಂದ ಹೊರನಾಡು-ಶೃಂಗೇರಿ ತೆರಳುವ ಪ್ರವಾಸಿಗರು ಅನಾನುಕೂಲ ಅನುಭವಿಸಿದರು.
ನಕ್ಸಲರ ಚಳವಳಿ ಇದ್ದಾಗ ನಮ್ಮ ಊರಿಗೆ ರಸ್ತೆ, ವಿದ್ಯುತ್ ಸಂಪರ್ಕ ಕೊಟ್ಟಿದ್ದು ಬಿಟ್ಟರೆ ಈವರೆಗೆ ಯಾವ ಸೌಲಭ್ಯವೂ ಸಿಕ್ಕಿಲ್ಲ. ಶೇಷೇಗೌಡ ಅವರ ಹತ್ಯೆ ಆದಾಗ ಅವರ ಊರಿಗೆ ರಸ್ತೆ, ಸೇತುವೆ ಸಂಪರ್ಕ ನೀಡುವ ಬಗ್ಗೆ ಸರ್ಕಾರ ಭರವಸೆ ನೀಡಿತ್ತು. ಅದರ ಭಾಗವಾಗಿ 50 ಲಕ್ಷದಲ್ಲಿ ಹೋರಿಕೊಂಡ ಸೇತುವೆ ಮಂಜೂರಾಗಿದೆ. ಆದರೆ ಈವರೆಗೂ ಕಾಮಗಾರಿ ಮಾಡದೆ ವಿಳಂಬ ಮಾಡಲಾಗುತ್ತಿದೆ.ಇದರಿಂದ ಗ್ರಾಮಸ್ಥರಿಗೆ ಅಪಾರ ಅನಾನುಕೂಲ ಆಗುತ್ತಿದೆ ಎಂದು ಗ್ರಾಮಸ್ಥರು ಕಿಡಿಕಾರಿದರು.
ಕಾಮಗಾರಿ ಆರಂಭಿಸುವವರೆಗೂ ರಸ್ತೆ ತೆರವು ಮಾಡುವುದಿಲ್ಲ ಎಂದು ಹಳ್ಳಿಗರು ಪಟ್ಟು ಹಿಡಿದರು. ಆಗ ಎಂಜಿನಿಯರ್ ಮತ್ತು ಗುತ್ತಿಗೆದಾರ ಜೆಸಿಬಿ ವಾಹನ ತರಿಸಿ ಇಂದೇ ಕೆಲಸ ಆರಂಭಿಸುವಂತೆ ಭರವಸೆ ನೀಡಿದರು. ಆನಂತರ ರಸ್ತೆ ತಡೆ ಕೈಬಿಡಲಾಯಿತು.
ಸ್ಥಳೀಯ ಮುಖಂಡರಾದ ರವಿಚಂದ್ರ, ಚೇತನ, ಗುರುಪ್ರಸಾದ್, ಸಂತೋಷ್, ದೇವರಾಜ್, ನಾಗರಾಜ್,ಯೋಗೀಶ್, ಲಲಿತ, ಗಜೇಂದ್ರ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
