ಕಳಸ:ಕಸ್ತೂರಿ ರಂಗನ್ ವರದಿಯು ಪಶ್ಚಿಮ ಘಟ್ಟದಲ್ಲಿ ಮೂಡಿಸಿರುವ ಗೊಂದಲ ಮತ್ತು ಆತಂಕಕ್ಕೆ ಆಯಾ ಭಾಗದ ಸಂಸದರೇ ಹೊಣೆ ಎಂದು ಜನಜಾಗೃತಿ ಸಂಗ್ರಾಮ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಜಗನ್ ದೂರಿದರು.
ಕಸ್ತೂರಿರಂಗನ್ ವರದಿ ಬಗ್ಗೆ ತಮ್ಮ ಸಂಘಟನೆಯು ರಾಜ್ಯ ಮಟ್ಟದಲ್ಲಿ ನಡೆಸುವ ಹೋರಾಟದ ಬಗ್ಗೆ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಕಸ್ತೂರಿ ರಂಗನ್ ವರದಿ ಬಗ್ಗೆ 11 ಬಾರಿ ಸಭೆ ನಡೆದರೂ ನಮ್ಮ ಭಾಗದ ಸಂಸದರು ವಿರೋಧ ವ್ಯಕ್ತಪಡಿಸಿಲ್ಲ. ಇದರಿಂದ ವರದಿ ಅನುಷ್ಟಾನದ ಮಟ್ಟಕ್ಕೆ ತಲುಪಿದೆ.ಪಶ್ಚಿಮ ಘಟ್ಟದ ಜನರ ಮತ್ತು ಅವರ ಜೀವನದ ಬಗ್ಗೆ ಸಂಸದರು ಗಮನ ಹರಿಸದೆ ಇರುವುದು ವಿಷಾದನೀಯ ಎಂದು ಅವರು ಹೇಳಿದರು.
ಆದ್ದರಿಂದ ಕಸ್ತೂರಿ ರಂಗನ್ ವರದಿಯಿಂದ ಮೂಲನಿವಾಸಿಗಳಿಗೆ, ಕಾರ್ಮಿಕರಿಗೆ ಆಗುವ ತೊಂದರೆ ಬಗ್ಗೆ ಸುಪ್ರೀಂಕೋರ್ಟಿಗೆ ಮನವರಿಕೆ ಮಾಡುವ ಬಗ್ಗೆ ನಮ್ಮ ಸಂಘಟನೆ ಕೆಲಸ ಮಾಡುತ್ತಿದೆ. ಪಶ್ಚಿಮ ಘಟ್ಟದಲ್ಲಿ ಕೃಷಿ ನಂಬಿಕೊಂಡು ಬದುಕು ಕಟ್ಟಿಕೊಂಡ ಸಾವಿರಾರು ಸಣ್ಣ ಕುಟುಂಬಗಳು ಮತ್ತು ಕಾರ್ಮಿಕರ ಬದುಕು ಬೀದಿಗೆ ಬರುವ ಅಪಾಯ ಇದೆ. ಆದ್ದರಿಂದ ಈ ಪ್ರದೇಶದಲ್ಲಿ ವರದಿ ಬಗ್ಗೆ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಕಸ್ತೂರಿರಂಗನ್ ವರದಿ ಜಾರಿಯಾದರೆ ಪಶ್ಚಿಮ ಘಟ್ಟದಲ್ಲಿ ಮೂಲಭೂತ ಸೌಕರ್ಯವನ್ನು ಪಡೆಯುವುದು ಕೂಡ ಕಷ್ಟವಾಗಲಿದೆ. ಇದು ನಮ್ಮ ಅಳಿವು ಉಳಿವಿನ ಪ್ರಶ್ನೆ ಕೂಡ ಆಗಿದ್ದು ರೈತರು ಮತ್ತು ಕಾರ್ಮಿಕರನ್ನು ಒಳಗೊಂಡು ನವದೆಹಲಿಯ ಜಂತರ್ ಮಂತರ್ನಲ್ಲಿ ಹೋರಾಟ ಆರಂಭಿಸಲು ಯೋಜಿಸಲಾಗಿದೆ. ರೈತರ ಸಹಿ ಸಂಗ್ರಹ ಮಾಡಿ ಸುಪ್ರೀಂಕೋರ್ಟಿನ ಗ್ರೀನ್ ಬೋರ್ಡಿಗೆ ಪ್ರಮಾಣಪತ್ರ ಸಲ್ಲಿಸಲು ಕೂಡ ನಿರ್ಧಾರ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಸ್ಥಳೀಯ ಮುಖಂಡರಾದ ಮಂಜಪ್ಪಯ್ಯ, ಜ್ವಾಲನಯ್ಯ, ಸಂತೋಷ್, ಶೇಷಗಿರಿ, ಆಶಾಲತಾ ಜೈನ್,ಸುರೇಶ್ ಭಟ್, ವಕೀಲ ಅನಂತೇಶ್ ಭಾಗವಹಿಸಿದ್ದರು.
