ಕಳಸ:ಸಾಮಾನ್ಯವಾಗಿ ರಾಜ್ಯೋತ್ಸವದಲ್ಲಿ ಪ್ರಶಸ್ತಿ ಪಡೆದವರ ಬಗ್ಗೆ ಅಪಸ್ವರ, ವಶೀಲಿಯ ಆರೋಪ ಮತ್ತು ರಾಜಕೀಯದ ವಾಸನೆ ಸದಾ ಇರುತ್ತದೆ. ಆದರೆ ಕಳಸ ತಾಲ್ಲೂಕು ಆಡಳಿತ ಕನ್ನಡ ರಾಜ್ಯೋತ್ಸವದ ಆಚರಣೆ ಸಂದರ್ಭದಲ್ಲಿ ಕಳಸ ತಾಲ್ಲೂಕಿನ ಇಬ್ಬರು ಅರ್ಹರಿಗೆ ರಾಜ್ಯೋತ್ಸವ ಪ್ರಶಸ್ತಿ ವಿತರಿಸಿ ಸೈ ಎನಿಸಿಕೊಂಡಿದೆ.
ಕೃಷಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದು ಈಗ ಪೂರ್ಣ ಪ್ರಮಾಣದ ಇತಿಹಾಸ ಸಂಶೋಧಕರಾಗಿರುವ ಹೆಚ್.ಆರ್.ಪಾಂಡುರಂಗ ಮತ್ತು ಕಳಸ ಸಮುದಾಯ ಆರೋಗ್ಯ ಕೇಂದ್ರದ ಗುತ್ತಿಗೆ ನೌಕರ ಶ್ರೀನಿವಾಸ ದುಂಡಿಗೆ ಅವರಿಗೆ ಕಳಸ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದು ಔಚಿತ್ಯಪೂರ್ಣ ಎನಿಸಿತು.

ಪ್ರತಿಫಲಾಪೇಕ್ಷೆ ಇಲ್ಲದೆ ಜಿಲ್ಲೆಯ ಯಾವುದೇ ಭಾಗದಲ್ಲಿ ಶಾಸನಗಳು ಕಂಡರೂ ಅವುಗಳ ಸಂರಕ್ಷಣೆ ಮಾಡುವುದು, ಅವುಗಳ ಐತಿಹಾಸಿಕ, ಧಾರ್ಮಿಕ ಮತ್ತು ಸಾಂಸ್ಕ್ರತಿಕ ಮಹತ್ವದ ಬಗ್ಗೆ ಅಧ್ಯಯನ ಮಾಡುವುದು ಪಾಂಡುರಂಗ ಅವರ ಹವ್ಯಾಸ. ಇದರಿಂದ ಅನೇಕ ಊರುಗಳ ದೇಗುಲಗಳ ಇತಿಹಾಸ, ಆ ಕಾಲದ ಅರಸರ, ಸಾಮಂತರ ಆಡಳಿತ ವೈಖರಿ, ಆಗಿನ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಸ್ಥಳೀಯರಿಗೆ ಅರ್ಥ ಆಗುತ್ತಿದೆ.
ಈಗಾಗಲೇ ಬಗೆಗೆಯ ನೂರಾರು ಶಾಸನಗಳನ್ನು ಪಾಂಡುರಂಗ ಅಧ್ಯಯನ ಮಾಡಿದ್ದಾರೆ.ಕನ್ನಡದ ಪ್ರಾಚೀನ ಇತಿಹಾಸದಿಂದ ಹಿಡಿದು ಇತ್ತೀಚಿನವರೆಗೂ ಎಲ್ಲ ಆಡಳಿತಗಾರರ ಹೆಸರುಗಳು, ಅವರ ಕಾಲ, ಸಾಧನೆಗಳು ಪಾಂಡುರಂಗ ಅವರ ಬಾಯಿಯ ತುದಿಯಲ್ಲೇ ಇದೆ.
ನಿವೃತ್ತಿ ನಂತರ ಇತಿಹಾಸ ಅಧ್ಯಯನದಲ್ಲಿ ಎಂ.ಎ. ಪದವಿ ಪಡೆದ ಪಾಂಡುರಂಗ ಪಿಹೆಚ್ಡಿ ಪಡೆಯುವ ಉದ್ದೇಶ ಹೊಂದಿದ್ದಾರೆ. ವಿಶೇಷವಾಗಿ ಕಳಸದ ಇತಿಹಾಸದ ಬಗ್ಗೆ ಸಮಗ್ರ ಅಧ್ಯಯನ ಮಾಡುತ್ತಿದ್ದು ಈ ಬಗ್ಗೆ ಭವಿಷ್ಯದಲ್ಲಿ ವಿವರವಾದ ಮಾಹಿತಿಯುಕ್ತ ಕೃತಿ ಪ್ರಕಟಿಸುವ ಉದ್ದೇಶ ಹೊಂದಿದ್ದಾರೆ.
ಮತ್ತೋರ್ವ ಪ್ರಶಸ್ತಿ ವಿಜೇತ ಶ್ರೀನಿವಾಸ ದುಂಡಿಗೆ ಕೃಷಿ ಕುಟುಂಬದವರು. ಕೃಷಿ ಜೊತೆಗೆ ಪೈಂಟರ್ ಕೂಡ ಅಗಿದ್ದ ಇವರು ಕಳಸ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಶಕದ ಹಿಂದೆ ಡಿ ದರ್ಜೆ ಗುತ್ತಿಗೆ ನೌಕರರಾಗಿ ಕೆಲಸಕ್ಕೆ ಸೇರಿದ್ದಾರೆ.
ಆಸ್ಪತ್ರೆಯ ಬಗ್ಗೆ ವಿಶೇಷ ಪ್ರೀತಿ ಹೊಂದಿರುವ ಶ್ರೀನಿವಾಸ್ ರೋಗಿಗಳ ಜೊತೆಗೆ ಅತ್ಯಂತ ಸದ್ಭಾವನೆಯ ನಡವಳಿಕೆ ಹೊಂದಿದ್ದಾರೆ. ಅಸಹಜ ಸಾವುಗಳು ಸಂಭವಿಸಿದಾಗ ವೈದ್ಯರ ಮಾರ್ಗದರ್ಶನದಲ್ಲಿ ಇದೇ ಶ್ರೀನಿವಾಸ್ ಮರಣೋತ್ತರ ಪರೀಕ್ಷೆಯ ವಿಧಿ ನೆರವೇರಿಸುತ್ತಾರೆ.
ನೂರಾರು ಶವಗಳ ಮರಣೋತ್ತರ ಪರೀಕ್ಷೆ ನಡೆಸಿರುವ ಶ್ರೀನಿವಾಸ್ ಹಗಲು ರಾತ್ರಿ ಎನ್ನದೆ ಈ ಕೆಲಸಕ್ಕೆ ಸಿದ್ಧರಿರುತ್ತಾರೆ. ಕೊಳೆತ ಶವಗಳ ಮರಣೋತ್ತರ ಪರೀಕ್ಷೆ ನಡೆಸುವಾಗಲೂ ತಮ್ಮ ಸಂಯಮ ಕಳೆದುಕೊಳ್ಳದೆ ಶವಕ್ಕೆ ಅಂತಿಮವಾಗಿ ಸಿಗಬೇಕಾದ ಗೌರವಕ್ಕೆ ಚ್ಯುತಿ ಆಗದಂತೆ ಕೆಲಸ ನಿರ್ವಹಸಿ ಸೈ ಎನಿಸಿಕೊಂಡಿದ್ದಾರೆ. ಎಲೆಮರೆಯ ಕಾಯಿಯಂತೆ ಕೆಲಸ ಮಾಡುವ ಶ್ರೀನಿವಾಸ್ ಅವರನ್ನು ಈ ಬಾರಿ ರಾಜ್ಯೋತ್ಸವದಲ್ಲಿ ಸನ್ಮಾನ ಮಾಡಿರುವುದು ತಾಲ್ಲೂಕು ಸಮಿತಿಯು ಶ್ಲಾಘನೀಯ ಕೆಲಸ ಮಾಡಿದಂತಾಗಿದೆ.
ಸನ್ಮಾನದ ಸಂದರ್ಭದಲ್ಲಿ ಕಳಸ ತಹಶೀಲ್ದಾರ್ ಮಂಜುನಾಥ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅ.ರಾ.ಸತೀಶ್ಚಂದ್ರ, ಮಮ್ತಾಜ್ ಬೇಗಂ, ಜಾನಕಿ, ಗೀತಾ ಮಕ್ಕಿಮನೆ, ಅಜಿತ್, ಆಶಾಲತಾ, ರಜಿತ್, ಜ್ವಾಲನಯ್ಯ, ಶುಕೂರ್, ಗಣೇಶ್ ಭಟ್ ಭಾಗವಹಿಸಿದ್ದರು.
