ಕಳಸ:ರಾಣಿಝರಿಯ ಕಣಿವೆಯನ್ನು ಕಂಡು ರೋಮಾಂಚನಗೊಳ್ಳುತ್ತಿದ್ದ ಪ್ರವಾಸಿಗರಿಗೆ ಇನ್ನು ಮತ್ತೊಂದು ಆಕರ್ಷಣೆ ಲಭ್ಯವಾಗಿದೆ.ತಾಲ್ಲೂಕಿನ ಗಡಿಭಾಗದ ರಾಣಿಝರಿ ವೀಕ್ಷಣಾ ತಾಣದಲ್ಲಿ ಗಾಜಿನ ಸೇತುವೆ ನಿರ್ಮಿಸಲು ಸಿದ್ಧತೆ ನಡೆದಿದೆ. ಗಾಜಿನ ಸೇತುವೆಗೆ ಅನುಮತಿ ನೀಡುವಂತೆ ಶಾಸಕಿ ನಯನಾ ಮೋಟಮ್ಮ ಅರಣ್ಯ ಸಚಿವರನ್ನು ಒತ್ತಾಯಿಸಿದ್ದಾರೆ.
ಚಿಕ್ಕಮಗಳೂರಿಗೆ ಇತ್ತೀಚೆಗೆ ಅರಣ್ಯ ಸಚಿವರು ಭೇಟಿ ನೀಡಿದ್ದಾಗ ಶಾಸಕಿ ಈ ಬಗ್ಗೆ ಬರೆದ ಪತ್ರವನ್ನು ಹಸ್ತಾಂತರ ಮಾಡಿದ್ದಾರೆ.ರಾಣಿ ಝರಿ ವೀಕ್ಷಣಾ ತಾಣವು ಜಿಲ್ಲೆಯಲ್ಲೇ ಅತ್ಯಂತ ಸುಂದರ ಮತ್ತು ಪ್ರಸಿದ್ಧ ಪ್ರವಾಸಿತಾಣ ಆಗಿದೆ. ವಾರಕ್ಕೆ ಸಾವಿರಾರು ಜನ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಅಲ್ಲಿ ಪ್ರವಾಸಿಗರಿಗೆ ಇನ್ನಷ್ಟು ಸಾಹಸಮಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅಲ್ಲಿ ಗಾಜಿನ ಸೇತುವೆ ನಿರ್ಮಾಣಕ್ಕೆ ಅಗತ್ಯ ಅನುಮತಿ ನೀಡುವಂತೆ ಶಾಸಕಿ ಅರಣ್ಯ ಸಚಿವರಲ್ಲಿ ಮನವಿ ಮಾಡಿದ್ದಾರೆ.

ರಾಣಿಝರಿಯಲ್ಲಿ ಗಾಜಿನ ಸೇತುವೆ ನಿರ್ಮಾಣ ಮಾಡಿದರೆ ಇನ್ನಷ್ಟು ಪ್ರವಾಸಿಗರು ಭೇಟಿನೀಡುತ್ತಾರೆ.ಇದರಿಂದ ಸ್ಥಳೀಯರಿಗೆ ಇನ್ನಷ್ಟು ಉದ್ಯೋಗಾವಕಾಶ ಸೃಷ್ಟಿ ಆಗುತ್ತದೆ.ಆರ್ಥಿಕ ಚಟುವಟಿಕೆ ಹೆಚ್ಚುತ್ತದೆ ಎಂದು ಶಾಸಕಿ ಮನದಟ್ಟು ಮಾಡಿದ್ದಾರೆ.
ಅರಣ್ಯ ಪ್ರದೇಶಕ್ಕೆ ಸೇರಿದ ಈ ಜಾಗದಲ್ಲಿ ಗಾಜಿನ ಸೇತುವೆ ನಿರ್ಮಾಣಕ್ಕೆ ಅಗತ್ಯ ಅನುಮತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ನಯನಾ ಮೋಟಮ್ಮ ಆಗ್ರಹಿಸಿದ್ದಾರೆ.
ಪ್ರವಾಸೋದ್ಯಮ ಇಲಾಖೆಯು ಇಲ್ಲಿ ಗಾಜಿನ ಸೇತುವೆ ನಿರ್ಮಾಣ ಮಾಡುವ ಬಗ್ಗೆ ಕಳೆ ದ 2 ವರ್ಷಗಳಿಂದ ಯೋಜನೆ ರೂಪಿಸಿದೆ.
