ಕಳಸ:ಅತಿ ಸಣ್ಣ ಬೆಳೆಗಾರರ ಹಿತರಕ್ಷಣೆಯನ್ನೂ ಮಾಡುತ್ತಿದ್ದ ಎಂ.ಜೆ.ದಿನೇಶ್ ಅವರು ಮತ್ತೆ ಅಧ್ಯಕ್ಷರಾಗಿ ಆಯ್ಕೆ ಆದಲ್ಲಿ ಬಹಳಷ್ಟು ಅನುಕೂಲ ಆಗುತ್ತದೆ ಎಂದು ಗಿರಿಜನ ಬೆಳೆಗಾರ ಸಂಘಗಳ ಪದಾಧಿಕಾರಿಗಳಾದ ಓಬಯ್ಯ, ಸುರೇಶ್, ಶ್ರೀನಿವಾಸ ತೋರಣಕಾಡು, ಸತೀಶ್ ಒಡ್ಡಿಕಟ್ಟೆ,ಅನಿಲ್ ಮುಜೇಕಾನು, ಗಣೇಶ್ ಕುಕ್ಕೋಡು, ಸುರೇಶ್ ಕೆರ್ನಾಳಿ, ರವಿ ಲಿಂಗಪ್ಪ, ಶಮಂತ್, ಶ್ರೀಧರ್ ಕಗ್ಗನಳ್ಳ ಅಭಿಪ್ರಾಯಪಟ್ಟಿದ್ದಾರೆ.
ಕಳೆದ 3 ವರ್ಷಗಳಲ್ಲಿ ಕಾಫಿ ಮಂಡಳಿಯ ಅಧ್ಯಕ್ಷರಾಗಿ ದಿನೇಶ್ ಅವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ವೇತನ ಪಡೆಯದೆ ಬೆಳೆಗಾರರ ಧ್ವನಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅತಿ ಹೆಚ್ಚು ವಿದೇಶಿ ವಿನಿಮಯ ತಂದು ಕೊಡುವ ಕಾಫಿ ಬಳೆಯ ಬಗ್ಗೆ ಮತ್ತು ಬೆಳೆಗಾರರ ಸರ್ವತೋಮುಖ ಅಭಿವೃದ್ಧಿ ಬಗ್ಗೆ ದಿನೇಶ್ ಬಹಳಷ್ಟು ಕೆಲಸ ಮಾಡಿದ್ದಾರೆ. ಆದ್ದರಿಂದ ಅವರನ್ನು ಇನ್ನೊಂದು ಅವಧಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಬೇಕು ಎಂದು ಕಳಸ ಬುಡಕಟ್ಟು ರೈತ ಉತ್ಪಾದಕರ ಸಂಘ ಮತ್ತು ಧನಲಕ್ಷ್ಮಿ ಗಿರಿಜನ ಕಾಫಿ ಬೆಳೆಗಾರರ ಸಂಘವು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಪರಿಶಿಷ್ಟ ಪಂಗಡಗಳು ಉತ್ಪಾದಿಸುವ ಕಾಫಿ ಮತ್ತು ಕಾಳುಮೆಣಸಿನ ಬೆಳೆಗಳ ಸಮಗ್ರ ಅಭಿವೃದ್ಧಿ ಯೋಜನೆಯು 2024ರಲ್ಲಿ ನಿಂತುಹೋದಾಗ ಯೋಜನೆಯನ್ನು ಕೂಡಲೇ ಕಾರ್ಯಾರಂಭಿಸುವಂತೆ ಅಧ್ಯಕ್ಷ ದಿನೇಶ್ ಅವರಲ್ಲಿ ಮನವಿ ಮಾಡಿದಾಗ ಅವರು ತಕ್ಷಣ ಸ್ಪಂದಿಸಿ ಯೋಜನೆ ಮುಂದುವರೆಸಿದರು. ಇದರಿಂದ ತಾಲ್ಲೂಕಿನ ಗಿರಿಜನ ಕುಟುಂಬಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಗಿರಿಜನ ಸಂಘಟನೆಗಳು ತಿಳಿಸಿವೆ.
ಗಿರಿಜನ ಯುವಕರಿಗೆ ಪ್ರತಿಷ್ಟಿತ 7 ಬೀನ್ ತರಬೇತಿ ಸಂಸ್ಥೆಯಲ್ಲಿ ಅರ್ಧ ಶುಲ್ಕದಲ್ಲೇ ಕಾಫಿ ಬೆಳೆ ಬಗ್ಗೆ ತರಬೇತಿ ಸಿಗಲು ಅನಕೂಲ ಮಾಡಿದ್ದಾರೆ.ಕಳಸ ಬುಡಕಟ್ಟು ಜನರು ಬೆಳೆಯುವ ಕಾಫಿ ಕಾಳುಮೆಣಸು ಬೆಳೆಗಳ ಮೌಲ್ಯವರ್ಧನೆ ಮತ್ತು ಮಾರಾಟ ವ್ಯವಸ್ಥೆ ಮಾಡುವ ಉದ್ದೇಶದಿಂದ ದಿನೇಶ್ ಅವರು ಕಳಸ ಬುಡಕಟ್ಟು ರೈತ ಉತ್ಪಾದಕರ ಕಂಪನಿ ಉದ್ಘಾಟಿಸಿದ್ದರು. ಮಾರುಕಟ್ಟೆ ವಿಸ್ತರಣೆ ಬಗ್ಗೆ ಹೈದರಾಬಾದ್ ಮೂಲದ ಸಂಸ್ಥೆ ಜೊತೆಗೆ ಮಾತುಕತೆ ನಡೆದಿದೆ.
ಕಾಫಿ ಮಂಡಳಿಯ ಅಧ್ಯಕ್ಷರಾಗಿ ಎಂ.ಜೆ. ದಿನೇಶ್ ಅವರನ್ನು ಇನ್ನೊಂದು ಅವಧಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡುವಂತೆ ತಾಲ್ಲೂಕಿನ ಗಿರಿಜನ ಸಂಘಟನೆಗಳು ಆಗ್ರಹಿಸಿವೆ.
