ಕಳಸ:ಪಟ್ಟಣದ ಸಮೀಪದಲ್ಲೇ ಇರುವ ನೆಲ್ಲಿಕೆರೆ ರಸ್ತೆ ಅಭಿವೃದ್ಧಿ ಮಾಡುವಂತೆ ಅಲ್ಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ನೆಲ್ಲಿಕೆರೆ, ಮಾವಿನಕೆರೆ,ಸಾಲಿನಮಕ್ಕಿ, ಕೆ.ಕೆಳಗೂರು ಪ್ರದೇಶದ ನೂರಾರು ಜನರು ಬಳಸುವ ಈ ರಸ್ತೆ ಗುಂಡಿ, ಕೆಸರಿನಿಂದ ತುಂಬಿದೆ.ಇದರಿಂದ ಕೃಷಿಕರಿಗೆ, ಕಾರ್ಮಿಕರಿಗೆ ಮತ್ತು ಶಾಲಾ ಮಕ್ಕಳಿಗೆ ಅತ್ಯಂತ ಅನಾನುಕೂಲ ಆಗಿದೆ. ಈ ರಸ್ತೆ ಸರಿಪಡಿಸುವಂತೆ ಹಲವಾರು ಬಾರಿ ಜನಪ್ರತಿನಿಧಿಗಳಿಗೆ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಉಪಯೋಗ ಆಗಿಲ್ಲ ಎಂದು ಗ್ರಾಮಸ್ಥರು ಬೇಸರ ಹೊರಹಾಕಿದ್ದಾರೆ.
‘ನಮ್ಮ ರಸ್ತೆ ಹಲವಾರು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕಳೆದ ಅವಧಿಯಲ್ಲಿ ಚರಂಡಿಗೆ 1 ಲಕ್ಷ ಅನುದಾನ ಇರಿಸಲಾಗಿತ್ತು. ಆದರೆ ಗುತ್ತಿಗೆದಾರ 8 ತಿಂಗಳ ಹಿಂದೆ ಕೆಲಸ ಮಾಡಿದ್ದರೂ ಈವರೆಗೂ ಹಣ ಪಾವತಿ ಆಗಿಲ್ಲ’ ಎಂದು ಪಂಚಾಯಿತಿ ಮಾಜಿ ಸದಸ್ಯ ಮೋಹನ್ ದೂರುತ್ತಾರೆ.
ಈ ರಸ್ತೆ ಬಳಕೆದಾರರು ಆರೋಗ್ಯ ಸಮಸ್ಯೆ ಇದ್ದಾಗ ದುಬಾರಿ ಬಾಡಿಗೆ ತೆತ್ತು ಕಳಸಕ್ಕೆ ಹೋಗಬೇಕಾಗಿದೆ.ಎಲ್ಲ ವರ್ಗದ ಜನರಿಗೂ ತೊಂದರೆ ಆಗಿದೆ. ಆದ್ದರಿಂದ ತುರ್ತಾಗಿ ರಸ್ತೆ ದುರಸ್ತಿ ಮಾಡಬೇಕು ಎಂದು ವಕೀಲ ವೈಶಾಖ್ ಆಗ್ರಹಿಸಿದ್ದಾರೆ.
