ಕಳಸ:ಮಲೆನಾಡಿನ ಭೂಮಾಲೀಕರ ದಾಹವನ್ನು ಹೋಗಲಾಡಿಸಲು ಸರ್ಕಾರ ಕೂಡಲೇ ಭೂಮಿತಿ ಕಾಯ್ದೆ ಜಾರಿಗೆ ತರಬೇಕು ಎಂದು ಸಿಪಿಐ ಕಳಸ ತಾಲ್ಲೂಕು ಕಾರ್ಯದರ್ಶಿ ಗೋಪಾಲ ಶೆಟ್ಟಿ ಅಭಿಪ್ರಾಯಪಟ್ಟರು.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಲೆನಾಡಿನ ಸಿರಿವಂತರ ದುರಾಸೆಯಿಂದಾಗಿ ಅಕ್ರಮವಾಗಿ ಭೂ ಮಂಜೂರಾತಿ ನಡೆದಿದೆ. ಅಧಿಕಾರಿಗಳು ಕೂಡ ಭ್ರಷ್ಟಾಚಾರ ಎಸಗಿ ಈ ಕೆಲಸಕ್ಕೆ ಕೈಜೋಡಿಸಿದ್ದಾರೆ.ಆದರೆ ಈ ಹಗರಣದಿಂದಾಗಿ ಕೆಲ ಅರ್ಹ ಫಲಾನುಭವಿಗಳಿಗೂ ಅನ್ಯಾಯ ಆಗಿದೆ. ಅದನ್ನು ಸರ್ಕಾರ ಗುರುತಿಸಿ ಸೂಕ್ತ ಕ್ರಮ ವಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈಗಾಗಲೇ ಭೂ ಮಂಜೂರಾತಿ ವಜಾ ಆಗಿರುವ ಬಹುತೇಕ ಪ್ರಕರಣಗಳ ಬಗ್ಗೆ ಭಾರತ ಕಮ್ಯುನಿಸ್ಟ್ ಪಕ್ಷವು ಸಮಗ್ರ ಅಧ್ಯಯನ ನಡೆಸಿದ ನಂತರವೇ ಸರ್ಕಾರ ಮತ್ತು ನ್ಯಾಯಾಲಯಕ್ಕೆ ದೂರನ್ನು ಸಲ್ಲಿಸಿ ಕ್ರಮಕ್ಕಾಗಿ ಆಗ್ರಹಿಸಿತ್ತು. ನಮ್ಮ ಹೋರಾಟದಿಂದಲೇ ಅನರ್ಹರ ಭೂಮಂಜೂರಾತಿ ವಜಾ ಆಗಿದೆ. ಭೂಕಬಳಿಕೆ ನ್ಯಾಯಾಲಯ ಮತ್ತು ಲೋಕಾಯುಕ್ತದಲ್ಲಿ ಕೂಡ ಈ ಬಗ್ಗೆ ಇನ್ನಷ್ಟು ತನಿಖೆ ನಡೆಯುತ್ತಿದೆ ಎಂದು ಗೋಪಾಲ ಶೆಟ್ಟಿ ತಿಳಿಸಿದ್ದಾರೆ.
”
ಅಕ್ರಮ ಸಕ್ರಮ ಹೆಸರಿನಲ್ಲಿ ಈಗಾಗಲೇ ನೂರಾರು ಎಕರೆ ಭೂಮಿ ಇರುವ ಮಾಲೀಕರು ಕೂಡ ಒಂದೇ ಕುಟುಂಬದ ತಂದೆ, ತಾಯಿ, ಮಗ, ಮಗಳು, ಸೊಸೆ ಹೆಸರಲ್ಲಿ ಭೂಮಿ ಪಡೆದಿರುವುದು ಅಪರಾಧ. ಒಂದು ಕುಟುಂಬಕ್ಕೆ ಗರಿಷ್ಟ 4.38 ಎಕರೆ ಮಂಜೂರಾತಿ ಎಂಬ ನಿಯಮ ಗಾಳಿಗೆ ತೂರಿ ಇಂತಹ ಅಕ್ರಮ ಮಂಜೂರಾತಿ ಮಾಡಿರುವ ಭ್ರಷ್ಟ ಅಧಿಕಾರಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ವಹಿಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.
ಹೊರರಾಜ್ಯದಲ್ಲಿ ವಾಸವಿರುವವರು ಕೂಡ ಕಳಸ, ಮೂಡಿಗೆರೆ ತಾಲ್ಲೂಕಿನಲ್ಲಿ ಭೂಮಿ ಮಂಜೂರಾತಿ ಪಡೆದಿದ್ದಾರೆ.ಇಂತಹ ಅನೇಕ ಅಕ್ರಮ ಮಂಜೂರಾತಿಗಳಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ.ಮಂಜೂರಾತಿ ರದ್ದಾಗಿರುವ ಭೂಮಿಯನ್ನು ಬಡ ಕಾರ್ಮಿಕರು ಮತ್ತು ಭೂರಹಿತರಿಗೆ ಸರ್ಕಾರ ಮಂಜೂರು ಮಾಡಬೇಕು ಎಂದೂ ಗೋಪಾಲ ಶೆಟ್ಟಿ ಆಗ್ರಹಿಸಿದರು. ಸಿಪಿಐ ಮುಖಂಡರಾದ ಲಕ್ಷಣ ಆಚಾರ್, ಗೋಪಾಲ ಹಡ್ಲು, ಚಂದ್ರೇಗೌಡ, ರಾಜು, ಸಾವಿತ್ರಿ, ಕೃಷ್ಣ, ರಜಾಕ್, ಅಣ್ಣಪ್ಪ, ಗಜೇಂದ್ರ ಮೇಲಿನ ಹೇಳಿಕೆಗೆ ಸಮ್ಮತಿ ಸೂಚಿಸಿದ್ದಾರೆ.
