ಕಳಸ:ಕಳಸ-ಕಳಕೋಡು ರಸ್ತೆಯ ಕಾಮಗಾರಿ ನೆನೆಗುದಿಗೆ ಬಿದ್ದು ದಶಕ ಕಳೆದಿದ್ದು ರಸ್ತೆ ಕಾಮಗಾರಿ ಮರೀಚಿಕೆಯೇ ಆಗಿದೆ.
ಕಳಸ ಪಟ್ಟಣದಿಂದ ಕಳಕೋಡು ಗ್ರಾಮಕ್ಕೆ 8 ಕಿ.ಮೀ ದೂರ ಇದ್ದು ಮೊದಲ 4 ಕಿ.ಮೀ ರಸ್ತೆ ಮೂರು ವರ್ಷದ ಹಿಂದೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಸುಸಜ್ಜಿತವಾಗಿ ನಡೆದಿದೆ. ಆದರೆ ಉಳಿದ ರಸ್ತೆಗೆ ಅನುದಾನ ಇದ್ದರೂ ಕಾಮಗಾರಿ ನಡೆಯುತ್ತಿಲ್ಲ.
ಕೊಳಮಗೆಯಿಂದ ಆನಮಗೆ ಮೂಲಕ ಕಳಕೋಡುವರೆಗೆ ಈ ಹಿಂದೆ ರಸ್ತೆ ಕಾಮಗಾರಿ ನಡೆದು 10 ವರ್ಷ ಕಳೆದಿದೆ. ಈ ರಸ್ತೆಯಲ್ಲಿ ದೊಡ್ಡ ಗುಂಡಿಗಳು ಇದ್ದು ವಾಹನ ಸಂಚಾರ ಅಸಾಧ್ಯ ಎಂಬಷ್ಟರ ಮಟ್ಟಿಗೆ ಹದಗೆಟ್ಟಿದೆ.ಆದರೆ ಈ ರಸ್ತೆ ದುರಸ್ತಿ ಕಾರ್ಯ ಮಾಡದೆ ಇರುವುದು ಗ್ರಾಮಸ್ಥರ ಕೋಪಕ್ಕೆ ಕಾರಣವಾಗಿದೆ.

‘ನಮ್ಮ ರಸ್ತೆ ಗುಂಡಿಯಲ್ಲಿ ಕಾರು ತಗೊಂಡು ಹೋದರೆ ಕಾರಿಗೆ ಹಾನಿ ಆಗುತ್ತೆ. ಮೂರು ವರ್ಷದಿಂದ ನಮ್ಮ ರಸ್ತೆಗೆ ದುಡ್ಡು ಇದೆ ಅನ್ನುತ್ತಾರೆ. ಆದರೆ ಈವರೆಗೂ ಕೆಲಸ ಮಾತ್ರ ಮಾಡುತ್ತಿಲ್ಲ’ ಎಂದು ಗ್ರಾಮಸ್ಥರು ಬೇಸರದಿಂದ ಹೇಳುತ್ತಾರೆ.
ಈ ರಸ್ತೆಯ ದುಸ್ಥಿತಿಯಿಂದ ಕಳಕೋಡು ಗ್ರಾಮಕ್ಕೆ ಬಸ್ ಸಂಚಾರವೂ ಇಲ್ಲವಾಗಿದೆ. ಇದರಿಂದ ಶಾಲಾ ಮಕ್ಕಳು, ಕೃಷಿಕರು ಮತ್ತು ಕಾರ್ಮಿಕರಿಗೂ ಅನಾನುಕೂಲ ಆಗಿದೆ.
ಈ ರಸ್ತೆ ಕಾಮಗಾರಿಗೆ ಈ ಹಿಂದೆಯೇ 2 ಕೋಟಿ ರೂಪಾಯಿ ಬಿಡುಗಡೆ ಆಗಿದೆ. ಆದರೆ ಈವರೆಗೆ ಎರಡು ಬಾರಿ ಟೆಂಡರ್ ಕರೆದರೂ ಯಾವುದೇ ಗುತ್ತಿಗೆದಾರ ಕೆಲಸ ಮಾಡಲು ಇಚ್ಛೆ ಪಡುತ್ತಿಲ್ಲ. ಈಗ ಮತ್ತೆ ಟೆಂಡರ್ ಆಗುತ್ತಿದೆ ಎಂದು ಶಾಸಕ ಆಪ್ತ ಕಾರ್ಯದರ್ಶಿ ಸಂಶುದ್ದೀನ್ ತಿಳಿಸಿದರು.
