ಕಳಸ:ಕಳೆದ 10 ದಿನಗಳಿಂದ ಪಟ್ಟಣದಲ್ಲಿ ಧಾರ್ಮಿಕ ಪ್ರಭಾವನೆ ಮತ್ತು ಸಾಂಸ್ಕøತಿಕ ಚಟುವಟಿಕೆಗೆ ಕಾರಣವಾಗಿದ್ದ ದುರ್ಗಾದೇವಿಯ ವಿಸರ್ಜನೆ ಗುರುವಾರ ಬೆಳಗಿನ ಜಾವ ನೆರವೇರಿತು.

ವಿಜಯದಶಮಿಯ ದಿನವಾದ ಬುಧವಾರ ಮಧ್ಯಾಹ್ನ ಸಿಂಹವಾಹಿನಿ ಪೂಜೆ, ಚಂಡಿಕಾ ಪಾರಾಯಣದ ನಂತರ ದೇವಿಯ ವಿಗ್ರಹದ ವಿಸರ್ಜನೆಗೆ ತಯಾರಿಗಳು ಆರಂಭವಾಗಿದ್ದವು. ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಸಾಗಿದ್ದ ದುರ್ಗಾ ದೇವಿ ಅದ್ದೂರಿ ಮೆರವಣಿಗೆ ಜನರನ್ನು ಆಕರ್ಷಿಸಿತ್ತು. ಅತ್ಯಂತ ಕಳೆಕಟ್ಟಿದ್ದ ದೇವಿಯ ವಿಗ್ರಹವನ್ನು ದೊಡ್ಡ ಅಲಂಕೃತ ವಾಹನದಲ್ಲಿ ಕೊಂಡೊಯ್ಯಲಾಯಿತು. ಪಟ್ಟಣದ ಭಕ್ತರೆಲ್ಲರೂ ದೇವಿಗೆ ಹಣ್ಣು ಕಾಯಿ ಸಮರ್ಪಿಸಿದ್ದರಿಂದ ಮೆರವಣಿಗೆ 10 ಗಂಟೆಗಳ ಕಾಲ ನಡೆದು ಗುರುವಾರ ಬೆಳಗಿನ ಜಾವ 4 ಗಂಟೆವರೆಗೆ ನಡೆಯಿತು.

ಮೆರವಣಿಗೆಯಲ್ಲಿ ಚಂಡೆ ವಾದನ, ಹುಲಿ ಕುಣಿತ, ಕೀಲುಕುದುರೆ ಗೊಂಬೆ, ನಾಸಿಕ್ ಡೋಲ್ ಆಕರ್ಷಣೆ ಆಗಿತ್ತು. ನವದುರ್ಗೆಯರ ವೇಷ ಧರಿಸಿದ್ದ ಬಾಲಕಿಯರು ಮತ್ತು ದ್ವಿಚಕ್ರ ವಾಹನದಲ್ಲಿ ಜಾಥಾ ನಡೆಸಿದ್ದ ಸ್ಥಳೀಯ ಮಹಿಳೆಯರು ಗಮನ ಸೆಳೆದರು.


ಕಳಸ ಮುಖ್ಯ ರಸ್ತೆಯಲ್ಲಿ ಬಯಲುಸೀಮೆಯ ಜಾನಪದ ನೃತ್ಯ, ಕುಣಿತಗಳು ಸ್ಥಳೀಯರ ಕುತೂಹಲ ಕೆರಳಿಸಿತ್ತು. ಜಾನಪದ ವಾದ್ಯಗಳ ನಾದಕ್ಕೆ ಮತ್ತು ಆಧುನಿಕ ಸಂಗೀತಕ್ಕೆ ತಕ್ಕಂತೆ ಯುವಜನರು ದಣಿವರಿಯದೆ ಹೆಜ್ಜೆ ಹಾಕಿದರು. ಬೆಳಗಿನ ಜಾವ ಭದ್ರಾ ನದಿಯ ಕೋಟೆತೀರ್ಥದಲ್ಲಿ ನಡೆದ ತೆಪ್ಪೋತ್ಸವ ಹಾಗೂ ವಿಸರ್ಜನೆಗೆ ಸಾವಿರಾರು ಜನರು ಸಾಕ್ಷಿಯಾದರು. ಶ್ರೀ ದುರ್ಗಾಪೂಜಾ ಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದರು.
