ಕಳಸ:ತಾಲ್ಲೂಕಿನಲ್ಲಿ ಕಾಡುಕೋಣಗಳ ಹಾವಳಿ ಮಿತಿ ಮೀರಿದ್ದು ಭಾನುವಾರ ಮತ್ತೋರ್ವ ಕೃಷಿಕನ ಮೇಲೆ ಕಾಡುಕೋಣ ಎರಗಿದೆ. ಮರಸಣಿಗೆ ಪಂಚಾಯಿತಿ ವ್ಯಾಪ್ತಿಯ ಗಾಳಿಗಂಡಿಯಲ್ಲಿ ಕಾಡುಕೋಣದ ದಾಳಿಯಿಂದ ಕೃಷಿಕರೊಬ್ಬರು ಭಾನುವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಲ್ಲಿನ ನಿವಾಸಿ ಸುಂದರ ಮೊಯಿಲಿ(59) ತಮ್ಮ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಕಾಡುಕೋಣವೊಂದು ಏಕಾಏಕಿ ಓಡಿಸಿಕೊಂಡು ಬಂದು ಅವರಿಗೆ ಗುದ್ದಿದೆ. ಕೋಣ ಗುದ್ದಿದ ಕಾರಣಕ್ಕೆ ಅವರು ಚರಂಡಿಗೆ ಬಿದ್ದು ಸೊಂಟ ಮತ್ತು ಬೆನ್ನಿಗೆ ಗಂಭೀರ ಗಾಯಗಳಾಗಿವೆ.

ಕಳಸ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಅವರನ್ನು ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲಾಗಿದೆ. ಮರಸಣಿಗೆ ಆಸುಪಾಸಿನಲ್ಲಿ ಕಾಡುಕೋಣಗಳ ಸಂಖ್ಯೆ ಹೆಚ್ಚಾಗಿದ್ದು ಕೃಷಿಕರು ಆತಂಕ ಹೊರಹಾಕಿದ್ದಾರೆ. ಕಾಫಿ ಕೃಷಿಗೆ ಸವಾಲಾಗಿರುವ ಕಾಡುಕೋಣಗಳನ್ನು ಕಾಡಿಗೆ ಅಟ್ಟಬೇಕು. ಗಾಯಗೊಂಡ ರೈತನಿಗೆ ಸೂಕ್ತ ಪರಿಹಾರ ಕೊಡಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ಘಟನೆ ನಡೆದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಭೇಟಿ ನೀಡಿದ್ದಾರೆ.
