ಕಳಸ:ಪಟ್ಟಣದ ಮಹಾವೀರ ರಸ್ತೆಯಲ್ಲಿ ನಿರ್ಮಿಸಲಾಗಿರುವ ಮಾದರಿ ಅಂಗನವಾಡಿ ಕಟ್ಟಡ, ಗ್ರಂಥಾಲಯ ಕಟ್ಟಡವನ್ನು ಶಾಸಕಿ ನಯನಾ ಮೋಟಮ್ಮ ಬುಧವಾರ ಉದ್ಘಾಟಿಸಿ ಮಾತನಾಡಿದರು.
ಕಳಸದಲ್ಲಿ ಮಾದರಿ ಅಂಗನವಾಡಿ ಕೇಂದ್ರದ ಉದ್ಘಾಟನೆ ಆಗಿದೆ. ಜನರು ಒಳ್ಳೆಯ ಕೆಲಸ ಮಾಡಿದ ಶಾಸಕರನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಕಾಂಗ್ರೆಸ್ ಪಕ್ಷಕ್ಕೆ ಬದ್ಧತೆ ಇದೆ.ಜನರ ಋಣ ತೀರಿಸುವ ಜವಾಬ್ದಾರಿ ಇದೆ ಎಂದರು.

ಕಳಸ ತಾಲ್ಲೂಕಿಗೆ ಸಿಗಬೇಕಾದ ಎಲ್ಲ ಸೌಲಭ್ಯ ಹಂತ ಹಂತವಾಗಿ ಕಲ್ಪಿಸುವ ಉದ್ದೇಶ ಇದೆ. ಕಳೆದ 3 ವರ್ಷದಲ್ಲಿ ಈ ಬಗ್ಗೆ ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಚುನಾವಣಾ ಬಹಿಷ್ಕಾರ ಮಾಡಿದ್ದ 42 ಗ್ರಾಮಗಳ ರಸ್ತೆ ಅಭಿವೃದ್ಧಿ ಆಗುತ್ತಿದೆ.ಮುಂದಿನ ದಿನಗಳಲ್ಲೂ ಕಳಸದ ಸಮಗ್ರ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದರು.
ಕಳಸದಲ್ಲಿ ಇತ್ತೀಚೆಗೆ ನಡೆದ ಪ್ರವಾಸೋದ್ಯಮ ದಿನ ಯಶಸ್ವಿ ಆಗಿದೆ. ತಾಲ್ಲೂಕಿನಲ್ಲಿ ಪ್ರವಾಸೋದ್ಯಮ ಅನೇಕ ಜನರ ಜೀವನಾಡಿ ಆಗಿದೆ.ಜನರ ಆರ್ಥಿಕತೆಗೂ ಕೊಡುಗೆ ನೀಡುತ್ತಿದೆ ಎಂದರು.

ನಮ್ಮ ತಾಯಿ ಕಾಲದಲ್ಲಿ ಸ್ತ್ರೀಶಕ್ತಿ ಸಂಘಕ್ಕೆ ಚಾಲನೆ ಕೊಟ್ಟಿದ್ದರು. ಇದೀಗ ಮಹಿಳಾ ಸಬಲೀಕರಣದ ಉದ್ದೇಶದಿಂದ ಅನೇಕ ಸ್ವಸಹಾಯ ಸಂಘಗಳು ಕೆಲಸ ಮಾಡುತ್ತಿದೆ. ಕಳಸದ ಈ ಸಭಾಂಗಣ ಮಹಿಳೆಯರ ಅಭಿವೃದ್ಧಿ ಚಟುವಟಿಕೆಗೆ ಬಳಕೆ ಆಗಲಿ ಎಂದರು.
ಶಾಸಕಿಯಾಗಿ ಯಾವುದೇ ಸಮುದಾಯದ ಬಗ್ಗೆ ತಾರತಮ್ಯ ಇಲ್ಲದೆ ಕೆಲಸ ಮಾಡುತ್ತಿದ್ದೇನೆ. ಎಲ್ಲ ಸಮುದಾಯವನ್ನೂ ಒಗ್ಗೂಡಿಸುವ ಕೆಲಸ ಮಾಡೋಣ. ಸಮಾಜ ಒಡೆಯುವ ಕೆಲಸವನ್ನು ಯಾರೂ ಮಾಡಬಾರದು ಎಂದು ಶಾಸಕಿ ನಯನಾ ಮೋಟಮ್ಮ ಕಿವಿಮಾತು ಹೇಳಿದರು.
ಅಂಗನವಾಡಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕಿ ನಯನಾ ಮೋಟಮ್ಮ ನಿವೃತ್ತ ಶಿಕ್ಷಕಿಯರು, ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಿದರು. ಶಾಸಕಿ ನಯನಾ ಮೋಟಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೇಣಿಕ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುದೀಪ್, ಕಳಸೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ಸತೀಶ್ಚಂದ್ರ, ಶುಕೂರ್ ಭಾಗವಹಿಸಿದ್ದರು.

ಮಂಜಿನಕಟ್ಟೆ ಬಳಿ ಆನಂತರ ನಡೆದ ಕಾರ್ಯಕ್ರಮದಲ್ಲಿ 5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಹೊರನಾಡು-ಬಾಳೂರು ರಾಜ್ಯ ಹೆದ್ದಾರಿ ಕಾಮಗಾರಿಗೂ ಶಾಸಕಿ ಗುದ್ದಲಿಪೂಜೆ ನೆರವೇರಿಸಿದರು.ಮುಖಂಡರಾದ ಪ್ರಭಾಕರ್, ಶ್ರೇಣಿಕ, ರಾಜೇಂದ್ರ. ಗಣೇಶ್ ಭಟ್, ಚಂದ್ರಮೋಹನ್, ವೀರೇಂದ್ರ, ಸುರೇಶ್ ಭಟ್, ಅಂಬರೀಶ್ ಭಟ್, ರಾಮಚಂದ್ರ ಹೆಬ್ಬಾರ್, ರಿಜ್ವಾನ್, ಪ್ರೇಮಾ ಭಾಗವಹಿಸಿದ್ದರು.
