ಕಳಸ:ಪ್ರವಾಸಿಗರ ಸಂಖ್ಯೆ ಹೆಚ್ಚಿದಂತೆ ಪ್ಲಾಸ್ಟಿಕ್ ಸಮಸ್ಯೆ ಹೆಚ್ಚುತ್ತಿದೆ. ನಮ್ಮ ಭೂಮಿಯನ್ನು ಶುದ್ಧವಾಗಿಡಲು ಪ್ಲಾಸ್ಟಿಕ್ ನಿಗ್ರಹಿಸುವುದು ಅನಿವಾರ್ಯ ಎಂದು ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೆ ಪಿಂಟೋ ಹೇಳಿದರು.
ಕಳಸದಲ್ಲಿ ಸೋಮವಾರ ನಡೆದ ಪ್ರವಾಸೋದ್ಯಮ ದಿನಾಚರಣೆ ಮತ್ತು ಕಳಸ ಟೂರಿಸಂ ಫೋರಂ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕಳಸದಲ್ಲಿ ಟ್ರೆಕ್ಕಿಂಗ್ ಮಾರ್ಗದರ್ಶಿಗಳ ತರಬೇತಿ ಕಾರ್ಯಕ್ರಮ ನಡೆಸಲಾಗುತ್ತದೆ. ಮೂಲ ಸೌಕರ್ಯದ ಕೊರತೆಯಿಂದ ಬಳಲುತ್ತಿರುವ ಪ್ರವಾಸಿ ಸ್ಥಳಗಳಿಗೆ ಅನುದಾನ ದೊರಕಿಸಲು ಪ್ರಯತ್ನಿಸುತ್ತೇನೆ ಎಂದೂ ಅವರು ಭರವಸೆ ನೀಡಿದರು.
ನೆಲ್ಲಿಬೀಡು ಗ್ರಾಮಸ್ಥರು ಮಾಡಗಲ್ ಗುಡ್ಡದ ಹೊಸ ಚಾರಣದ ಬಗ್ಗೆ ನೀಡಿದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಹೊಸ ಚಾರಣದ ಮಾರ್ಗಕ್ಕೆ ಅನುಮತಿ ದೊರಕಿಸಲು ಪ್ರಯತ್ನ ನಡೆಸುತ್ತೇನೆ. ಟ್ರೀ ಪಾರ್ಕ್ ಮತ್ತಿತರ ಪ್ರವಾಸಿ ಪೂರಕ ಚಟುಟವಟಿಕೆಗೆ ಅವಕಾಶ ಸಿಗಲಿದೆ ಎಂದರು.
ಇದಕ್ಕೂ ಮುನ್ನ ಪ್ರಾಸ್ತಾವಿಕ ಮಾತನಾಡಿದ ಫೋರಂ ಕಾರ್ಯದರ್ಶಿ ಚಂದ್ರಮೋಹನ್, ಫೋರಂ ಮೂಲಕ ಜವಾಬ್ದಾರಿಯುತ ಪ್ರವಾಸೋದ್ಯಮ ನಡೆಯಲಿದೆ.ಸರ್ಕಾರ ಕಳಸದಲ್ಲಿ ಪ್ರವಾಸಿ ಮಾಹಿತಿ ಕೇಂದ್ರ ತೆರೆಯಬೇಕು. ಹೋಂಸ್ಟೇಗಳ ನೊಂದಣಿಗೆ ಸರಳ ಪ್ರಕ್ರಿಯೆ ನಡೆಸಬೇಕು ಎಂದರು.
ವಲಯ ಅರಣ್ಯಾಧಿಕಾರಿ ಗೌರವ್ ಮಾತನಾಡಿ, ಭದ್ರಾ ನದಿಯ ಪರಿಶುದ್ಧ ನೀರು ಮತ್ತು ಇಲ್ಲಿನ ಜನರ ಸಂಸ್ಕ್ರತಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.ಪರಿಸರಕ್ಕೆ ಪೂರಕವಾಗಿ ಪ್ರವಾಸೋದ್ಯಮ ನಡೆಸಿ ಸ್ವಚ್ಛ ಹಸಿರು ಕಳಸ ಉಳಿಸಿ ಎಂದೂ ಮನವಿ ಮಾಡಿದರು.

ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಪ್ರಥ್ವಿಜಿತ್ ಮಾತನಾಡಿ, ಪ್ರವಾಸೋದ್ಯಮ ಅತಿಯಾದರೂ ಸ್ಥಳೀಯ ಸಮಸ್ಯೆ ಹೆಚ್ಚಾಗುತ್ತದೆ. ಪ್ರವಾಸಿಗರು ಯಾವುದೇ ದುಸ್ಸಾಹಸಕ್ಕೆ ಮುಂದಾದರೂ ಅವರನ್ನು ಎಚ್ಚರಿಕೆಯಿಂದ ನಿಯಂತ್ರಿಸಬೇಕು ಎಂದರು.
ಜಿಲ್ಲಾ ಹೋಂಸ್ಟೇ ಮಾಲೀಕರ ಸಂಘದ ಅಧ್ಯಕ್ಷ ತೇಜಸ್ವಿ ಮಾತನಾಡಿ, ಕಳಸವು ಚಿಕ್ಕಮಗಳೂರು ಜಿಲ್ಲೆಯ ಕಿರೀಟ. ಇದನ್ನು ಪ್ಲಾಸ್ಟಿಕ್ ರಹಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದರು.
ಟೂರಿಸಂ ಫೋರಂ ಅಧ್ಯಕ್ಷ ಸತೀ ಜೈನ್ ಮಾತನಾಡಿ, ಇಕೋ ಟೂರಿಸಂ ಇಲಾಖೆಯಲ್ಲಿ ಈ ಹಿಂದೆ ಬಹಳ ಭ್ರಷ್ಟಾಚಾರ ನಡೆದಿದೆ. ಆದರೆ ತಪ್ಪಿತಸ್ಥರಿಗೆ ಶಿಕ್ಷೆ ಆಗಿಲ್ಲ. ಚಾರಣದ ಟೆಕೆಟ್ ನೀಡುವಿಕೆಯಲ್ಲೂ ಅಕ್ರಮ ನಡೆದಿದೆ. ಟಿಕೆಟ್ ಪಡೆಯದೆ ಅಕ್ರಮ ಚಾರಣ ಕೂಡ ಸಿಬ್ಬಂದಿ ಕುಮ್ಮಕ್ಕಿನಲ್ಲೇ ನಡೆಯುತ್ತಿದೆ ಎಂದು ಆರೋಪಿಸಿದರು.
ಮುಖಂಡರಾದ ಕೆ.ಆರ್.ಪ್ರಭಾಕರ್, ಕೆ.ಕೆ. ಬಾಲಕೃಷ್ಣ ಭಟ್, ಪ್ರಸನ್ನ, ತಹಶೀಲ್ದಾರ್ ಮಂಜುನಾಥ್, ಸಬ್ ಇನ್ಸ್ಪೆಕ್ಟರ್ ಚಂದ್ರಶೇಖರ್, ಅಜಿತ್ ಭಟ್ ಸುಳ್ಯ ಭಾಗವಹಿಸಿದ್ದರು.
