ಕಳಸ:ಇಲ್ಲಿನ ಸಾರ್ವಜನಿಕ ಶ್ರೀ ದುರ್ಗಾಪೂಜಾ ಸಮಿತಿಯು 38ನೇ ವರ್ಷದ ನವರಾತ್ರಿಯನ್ನು ದುರ್ಗಾ ಮಂಟಪದಲ್ಲಿ ಇದೇ 11ರಿಂದ 21ರವರೆಗೆ ಆಚರಿಸಲಿದೆ.
11ರಂದು ಕಳಸೇಶ್ವರ ಸ್ವಾಮಿಗೆ ಶತರುದ್ರಾಭಿಷೇಕ ನೆರವೇರಿಸಿದ ನಂತರ ಗಿರಿಜಾಂಬಾ ದೇವಸ್ಥಾನದಲ್ಲಿ ಸಪ್ತಶತಿ ಪಾರಾಯಣ, ಗಣಹೋಮ ನೆರವೇರಿಸಿ ಆನಂತರ ದುರ್ಗಾದೇವಿ ವಿಗ್ರಹ ಪ್ರತಿಷ್ಟಾಪನೆ ಮಾಡಲಾಗುತ್ತದೆ. ಆನಂತರ ನವರಾತ್ರಿಯ ಎಲ್ಲ ಒಂಬತ್ತು ದಿನಗಳಂದು ದೇವಿಗೆ ವಿಶಿಷ್ಟ ಅಲಂಕಾರಗಳನ್ನು ಮಾಡಲಾಗುತ್ತದೆ. ಪ್ರತಿ ದಿನವೂ ಪಾರಯಣ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ದುರ್ಗಾಪೂಜಾ ಸಮಿತಿಯ ಅಧ್ಯಕ್ಷ ಎನ್.ಪಿ.ಭರತ್ರಾಜ್ ತಿಳಿಸಿದ್ದಾರೆ.
ದಸರೆಯ ಸಡಗರದಲ್ಲಿ ನಡೆಯುವ ಈ ಕಾರ್ಯಕ್ರಮದ ಎಲ್ಲ 9 ದಿನವೂ ರಾಜ್ಯದ ಖ್ಯಾತ ಕಲಾವಿದರಿಂದ ನಾಟಕ, ಯಕ್ಷಗಾನ ಉಗಮ ಸಂಗೀತ, ರಸಮಂಜರಿ, ನೃತ್ಯ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ನಿರ್ಮಲ್ ಕುಮಾರ್ ಮಾಹಿತಿ ನೀಡಿದ್ದಾರೆ.
ಅಕ್ಟೋಬರ್ 16ರಂದು ದಸರಾ ಕ್ರೀಡಾಕೂಟ ಆಯೋಜಿಸಲಾಗಿದ್ದು ಪುರುಷರಿಗೆ ಮತ್ತು ಮಹಿಳೆಯರಿಗೆ ವಾಲೀಬಾಲ್, ಥ್ರೋಬಾಲ್, ಹಗ್ಗಜಗ್ಗಾಟ, ರಂಗೋಲಿ ಮತ್ತಿತರ ಆಟೋಟ ಏರ್ಪಡಿಸಲಾಗಿದೆ.18ರಂದು ಹೊರನಾಡಿನ ರಾಜಲಕ್ಷ್ಮಿ ಜೋಷಿ ಅವರಿಂದ ಸೌಂದರ್ಯ ಲಹರಿ ನಡೆಯಲಿದ್ದು, ಶಾಸಕಿ ನಯನಾ ಮೋಟಮ್ಮ ಮಹಿಳೆಯರಿಗೆ ಬಾಗಿನ ಅರ್ಪಿಸಲಿದ್ದಾರೆ.
19ರಂದು ಧಾರ್ಮಿಕ ಸಭೆ ನಡೆಯಲಿದ್ದು ಆದಿಚುಂಚನಗಿರಿ ಶಾಖಾ ಮಠದ ಶೃಂಗೇರಿ ಶಾಖೆಯ ಗುಣನಾಥಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.ಜನಪ್ರತಿನಿಧಿಗಳು, ಸ್ಥಳೀಯ ಮುಖಂಡರು ಭಾಗವಹಿಸಲಿದ್ದಾರೆ. 21ರಂದು ವಿಜಯದಶಮಿ ಆಚರಣೆ ನಂತರ ಕಳಸದ ರಾಜಬೀದಿಗಳಲ್ಲಿ ಮೆರವಣಿಗೆ ಮೂಕ ದುರ್ಗಾದೇವಿಯನ್ನು ಕೊಂಡೊಯ್ದು ಕೋಟಿತೀರ್ಥದಲ್ಲಿ ತೆಪ್ಪೋತ್ಸವದ ನಂತರ ವಿಸರ್ಜನೆ ಮಾಡಲಾಗುತ್ತದೆ ಎಂದು ಸಮಿತಿ ಕಾರ್ಯದರ್ಶಿ ಮಂಜುನಾಥ್ ಮಾಹಿತಿ ನೀಡಿದ್ದಾರೆ.
