ಕಳಸ: ಕಳಸ ತಾಲ್ಲೂಕಿನಲ್ಲಿ ರಸ್ತೆಗಳ ಸ್ಥಿತಿ ಅಧೋಗತಿ ಆಗಿದೆ. ಹಿಂದಿನ ಸರ್ಕಾರಗಳು ಮಳೆಗಾಲ ಕಳೆದ ಕೂಡಲೇ ರಸ್ತೆ ಅಭಿವೃದ್ಧಿ ಮಾಡುತ್ತಿದ್ದವು. ಆದರೆ ಕಳೆದ 3 ವರ್ಷದಿಂದ ರಸ್ತೆಗಳ ದುರಸ್ತಿಗೆ ಯಾವುದೇ ಕ್ರಮವಹಿಸುತ್ತಿಲ್ಲ ಎಂದು ಬಿಜೆಪಿ ಮುಖಂಡ ಶೇಷಗಿರಿ ದೂರಿದರು.
ಕಳಸ-ಕೊಟ್ಟಿಗೆಹಾರ, ಕಳಸ-ಎಸ್.ಕೆ.ಬಾರ್ಡರ್ ರಸ್ತೆಗಳು ಹದಗೆಟ್ಟಿದ್ದು ವಾಹನ ಮಾಲೀಕರು ಸರ್ಕಾರವನ್ನು ಶಪಿಸುತಿದ್ದಾರೆ. ಶಾಸಕರು ಈ ರಸ್ತೆಗಳ ಅಭಿವೃದ್ಧಿ ನಡೆಸಲಾರದೆ ಸೋತಿದ್ದಾರೆ ಎಂದು ಶೇಷಗಿರಿ ಆರೋಪಿಸಿದರು.
ವಿಧಾನಪರಿಷತ್ ಮಾಜಿ ಸದಸ್ಯ ಎಂ.ಕೆ.ಪ್ರಾಣೇಶ್ ಮಾತನಾಡಿ, ಕಳಸ ತಾಲ್ಲೂಕಿನಲ್ಲಿ ರಸ್ತೆಗಳು ಹದಗೆಟ್ಟಿರುವ ಬಗ್ಗೆ ಜನರು ರೋಸಿ ಹೋಗಿದ್ದಾರೆ. ದುರಾಡಳಿತದ ಬಗ್ಗೆ ದನಿ ಎತ್ತುವವರಿಗೆ ಕಾಂಗ್ರೆಸ್ ಮುಖಂಡರು ಬೆದರಿಕೆ ಹಾಕುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ ಎಂದರು.
ದೇಶದಲ್ಲಿ ಕಾಂಗ್ರೆಸ್ ಪಕ್ಷ ಎಳೇ ಮಕ್ಕಳನ್ನು ಮುಂದಿಟ್ಟುಕೊಂಡು ಹೋರಾಟದ ಹೆಸರಿನಲ್ಲಿ ದಾರಿತಪ್ಪಿಸುತ್ತಿದೆ ಎಂದು ಪ್ರಾಣೇಶ್ ಆರೋಪಿಸಿದರು. ಮೂಡಿಗೆರೆ ಕ್ಷೇತ್ರದ ಹದಗೆಟ್ಟ ರಸ್ತೆಗಳ ಅಭಿವೃದ್ಧಿಗೆ ಹಣ ಇಲ್ಲ ಎಂದು ಹೇಳಲಾಗುತ್ತಿದೆ. ನಾವು ಕೊಟ್ಟಿರುವ ತೆರಿಗೆ ಹಣ ಎಲ್ಲಿಗೆ ಹೋಗುತ್ತಿದೆ. ಹಣವನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುವ ಕಾಂಗ್ರೆಸ್ ಪಕ್ಷ ರಾಜ್ಯದ ಅಭಿವೃದ್ಧಿಗೆ ಮಾರಕ ಆಗಿದೆ ಎಂದರು.

ಮಾಜಿ ಸಚಿವ ಜೀವರಾಜ್ ಮಾತನಾಡಿ, ಸರ್ಕಾರದ ಭಾಗ್ಯಗಳು ಜನರಿಗೆ ಸಕಾಲಕ್ಕೆ ಸಿಗದೆ ಪೊಳ್ಳು ಆಶ್ವಾಸನೆ ಆಗಿದೆ. ವನ್ಯಮೃಗಗಳು ಮತ್ತು ಮನುಷ್ಯರ ನಡುವೆ ಸಂಘರ್ಷ ಹೆಚ್ಚಾಗಿದ್ದು ಕಳೆದ ವರ್ಷದಲ್ಲಿ ಹತ್ತಾರು ಜನರು ಸಾವಿಗೀಡಾಗಿದ್ದು ಅನೇಕರು ಗಾಯಗೊಂಡಿದ್ದಾರೆ. ಮಲೆನಾಡಿನ ರೈತರು ಸಂಕಷ್ಟದಲ್ಲಿದ್ದು ಕಸ್ತೂರಿರಂಗನ್ ವರದಿಯ ನೆಪದಲ್ಲಿ ರೈತರನ್ನು ಕೇಂದ್ರ ಸಕಾರದ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ನಡೆದಿದೆ ಎಂದು ಜೀವರಾಜ್ ಹೇಳಿದರು.
ಜೆಡಿಎಸ್ ಮುಖಂಡ ಮಂಜಪ್ಪಯ್ಯ ಮಾತನಾಡಿ, ಕಳಸ ತಾಲ್ಲೂಕು ಕೇಂದ್ರ ಆಗಿದ್ದರೂ ಜನರ ಯಾವುದೇ ಕೆಲಸ ಆಗುತ್ತಿಲ್ಲ. ಕಳಸದಲ್ಲಿ ಭ್ರಷ್ಟ ಅಧಿಕಾರಿಗಳ ಬೆಂಬಲದಿಂದ ಪುಡಾರಿಗಳು ಹಣ ದೋಚುತ್ತಿದ್ದಾರೆ ಎಂದು ಆರೋಪಿಸಿದರು.
ಮತ್ತೋರ್ವ ಮುಖಂಡ ದೀಪಕ್ ದೊಡ್ಡಯ್ಯ ಮಾತನಾಡಿ, ಕಳಸ ತಾಲ್ಲೂಕು ಕೇಂದ್ರದಲ್ಲಿ ತಾಲ್ಲೂಕು ಕಚೇರಿ ನಾಮಕಾವಸ್ಥೆಗೆ ಇದ್ದು ಜನರು ತಮ್ಮ ಕೆಲಸಕ್ಕಾಗಿ ಮೂಡಿಗೆರೆಗೇ ಹೋಗಬೇಕಾಗಿದೆ. ಈ ಬಗ್ಗೆ ಶಾಸಕರು ಯಾಕೆ ವಿಧಾನಸಭೆಯಲ್ಲಿ ಮಾತನಾಡಿಲ್ಲ ಎಂದು ಪ್ರಶ್ನಿಸಿದರು.
ಮೂಡಿಗೆರೆ ಕ್ಷೇತ್ರದ ಯಾವುದೇ ರಸ್ತೆ ಕೂಡ ಸುಸ್ಥಿತಿಯಲ್ಲಿ ಇಲ್ಲ.ಪರಿಶಿಷ್ಟ ಜಾತಿಗೆ ಮೀಸಲಾದ ಹಣವನ್ನು ಬೇರೆ ಕೆಲಸಕ್ಕೆ ಬಳಸಿದಾಗ ಶಾಸಕಿ ನಯನಾ ಮೋಟಮ್ಮ ಯಾಕೆ ಸುಮ್ಮನಿದ್ದರು ಎಂದು ಅವರು ಪ್ರಶ್ನಿಸಿದರು.
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಂಜನ್ ಅಜಿತ್ ಕುಮಾರ್ ಮಾತನಾಡಿ, ಮೂಡಿಗೆರೆ ಕ್ಷೇತ್ರಕ್ಕೆ ಅನುದಾನ ಬಂದರೆ ಮೊದಲು ಕಾಂಗ್ರೆಸ್ ಮುಖಂಡರಿಗೆ ಕಮಿಷನ್ ಹೋದ ನಂತರವಷ್ಟೇ ಕಾಮಗಾರಿ ಶುರು ಆಗುತ್ತದೆ. ಕಳಪೆ ಕಾಮಗಾರಿಗೆ ಕಾಂಗ್ರೆಸ್ ಮುಖಂಡರೇ ಕಾರಣರಾಗಿದ್ದಾರೆ ಎಂದು ಆರೋಪಿಸಿದರು.
ಮುಖಂಡ ಜ್ವಾಲನಯ್ಯ, ಮುಖಂಡರಾದ ಶ್ರೀಕಾಂತ್, ಮಹೇಶ್, ಸಂತೋಷ್, ಸುಂದರ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.
