ಕಳಸ:ಇಲ್ಲಿನ ದುರ್ಗಾಮಂಟಪದಲ್ಲಿ ಭಾನುವಾರ ಹೂವಿನಪೂಜೆ ಪ್ರಯುಕ್ತ ನಡೆದ ವಿಶೇಷ ಪೂಜೆಯಲ್ಲಿ ಭಕ್ತರು ಭಾಗವಹಿಸಿ ಕೃತಾರ್ಥತೆ ತೋರಿದರು.
ನವರಾತ್ರಿಯ ಪ್ರಯುಕ್ತ ಸಾರ್ವಜನಿಕ ದುರ್ಗಾಪೂಜಾ ಸಮಿತಿಯು 38ನೇ ವರ್ಷದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ದುರ್ಗಾಹೋಮ ಮತ್ತು ಹೂವಿನ ಪೂಜೆ ವಿಶಿಷ್ಟ ಆರಾಧನೆ ಆಗಿದೆ.ಶನಿವಾರ ರಾತ್ರಿಯಿಂದಲೇ ಹತ್ತಾರು ಕಾರ್ಯಕರ್ತರು ಇಡೀ ದುರ್ಗಾ ಮಂಟಪವನ್ನು ಬಗೆಬಗೆಯ ಹೂಗಳಿಂದ ಅಲಂಕರಿಸಿದ್ದರು. ಹೂವಿನ ಪೂಜೆ ಕಣ್ತುಂಬಿಕೊಳ್ಳಲು ಭಕ್ತರ ದಂಡು ತಾಲ್ಲೂಕಿನ ವಿವಿಧೆಡೆಯಿಂದ ಬೆಳಗ್ಗಿನಿಂದಲೇ ಕಳಸದ ದುರ್ಗಾಮಂಟಪದ ಕಡೆಗೆ ಹೆಜ್ಜೆ ಹಾಕಿತ್ತು.

ಹೊರನಾಡಿನ ರಾಜಲಕ್ಷ್ಮಿ ಜೋಷಿ ಮತ್ತು ಸಂಗಡಿಗರು ಸೌಂದರ್ಯ ಲಹರಿ ಎಂಬ ಕಾರ್ಯಕ್ರಮ ನೆರವೇರಿಸಿದರು. ಆನಂತರ ಶಾಸಕಿ ನಯನಾ ಮೋಟಮ್ಮ ನೆರೆದಿದ್ದ ಮಹಿಳೆಯರೆಲ್ಲರಿಗೂ ಬಾಗಿನ ಅರ್ಪಿಸಿದರು. ಸುಮಾರು 5000 ಜನರಿಗೆ ಅನ್ನಸಂತರ್ಪಣೆಯು ವ್ಯವಸ್ಥಿತವಾಗಿ ನಡೆಯಿತು. ದುರ್ಗಾ ಪೂಜಾ ಸಮಿತಿಯ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.
