ಕಳಸ:ಕುದುರೆಮುಖ ಮತ್ತು ನೇತ್ರಾವತಿ ಚಾರಣದ ಆನ್ಲೈನ್ ಟೆಕೆಟ್ ಮಾಫಿಯಾವನ್ನು ಕುದುರೆಮುಖ ರಾಷ್ಟ್ರೀಯ ಉದ್ಯಾನದ ದಕ್ಷ ಅಧಿಕಾರಿ ಲತಾ ಭಟ್ ಬೇಧಿಸಿದ್ದು ಅಕ್ರಮ ಟೆಕೆಟ್ ಜಾಲ ಪತ್ತೆಯಾಗಿದೆ. ನೇತ್ರಾವತಿ ಚಾರಣಕ್ಕೆ ಬಂದಿದ್ದ ಯುವಜನರ ಟೆಕೆಟ್ ಪರಿಶೀಲನೆಗೆಂದು ದಿಢೀರ್ ದಾಳಿ ಮಾಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲತಾ ಭಟ್ ನಿಯಮಬಾಹಿರವಾಗಿ ಟಿಕೆಟ್ ಪಡೆದವರ ಬೆವರು ಇಳಿಸಿದ್ದಾರೆ.
ಪ್ರತಿ ವಾರವೂ ನಿಮಿಷಗಳಲ್ಲೇ ಕುದುರೆಮುಖ ಮತ್ತು ನೇತ್ರಾವತಿ ಚಾರಣದ ಟಿಕೆಟ್ಗಳು ಆನ್ಲೈನ್ನಲ್ಲಿ ಮಾರಾಟ ಆಗುತ್ತಿರುವುದರ ಬಗ್ಗೆ ಕಳಸದ ಹೋಂಸ್ಟೇ ಮಾಲೀಕರು ಅಚ್ಚರಿ ವ್ಯಕ್ತಪಡಿಸಿ ಅಕ್ರಮದ ಬಗ್ಗೆ ಆರೋಪ ಮಾಡಿದ್ದರು. ಸ್ಥಳೀಯ ಹೋಂಸ್ಟೇಗಳ ಅತಿಥಿಗಳಿಗೆ ಟೆಕೆಟ್ ಸಿಗದ ಬಗ್ಗೆ ಅಸಮಾಧಾನ ವ್ಯಕ್ತವಾಗಿತ್ತು.
ಕಾರ್ಕಳ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್ ಬಾಬು ಈ ಬಗ್ಗೆ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದರು. ಅದರಂತೆ ಶುಕ್ರವಾರ ಚಾರಣಕ್ಕೆ ಬಂದಿದ್ದ ಯುವಕ ಯುವತಿಯರ ಟೆಕೆಟ್ಗಳನ್ನು ಕಾರ್ಕಳ ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲತಾ ಭಟ್ ಮತ್ತು ತಂಡ ಅಚ್ಚರಿಯ ದಾಳಿ ರೂಪದಲ್ಲಿ ಪರಿಶೀಲನೆ ಮಾಡಿತ್ತು.
ಆ ವೇಳೆಗೆ ಚಾರಣಕ್ಕೆ ಬಂದಿದ್ದವರ ಟೆಕೆಟ್ ಮತ್ತು ಅವರ ವಿಳಾಸದ ಗುರುತಿನ ಚೀಟಿಗಳಿಗೆ ತಾಳೆ ಆಗಲಿಲ್ಲ. ಇದರ ಬಗ್ಗೆ ಎಸಿಎಫ್ ಗಂಭೀರವಾಗಿ ವಿಚಾರಣೆ ನಡೆಸಿದಾಗ ಇವರೆಲ್ಲರೂ ಸ್ವತಃ ಟೆಕೆಟ್ ಪಡೆಯದೆ ಬೆಂಗಳೂರಿನ ಚಾರಣದ ಸಂಸ್ಥೆ ಮೂಲಕ ಚಾರಣಕ್ಕೆ ಬಂದಿದ್ದು ಬೆಳಕಿಗೆ ಬಂತು.ಚಾರಣಕ್ಕೆ ಬಂದಿದ್ದ ಅನೇಕ ಜನರಿಗೂ ತಾವು ಅಕ್ರಮ ಟೆಕೆಟ್ ಪಡೆದ ಬಗ್ಗೆ ಮಾಹಿತಿ ಇರಲಿಲ್ಲ. ಪ್ಯಾಕೇಜ್ ಪ್ರವಾಸಕ್ಕೆ ದೊಡ್ಡ ಮೊತ್ತ ತೆತ್ತು ಅವರು ಬಂದಿದ್ದರು.

ಅಕ್ರಮ ಟೆಕೆಟ್ ಪಡೆದಿದ್ದ 50ಕ್ಕೂ ಹೆಚ್ಚು ಯುವಜನರಿಗೆ ಎಸಿಎಫ್ ಲತಾ ಭಟ್ ಚಾರಣಕ್ಕೆ ಅವಕಾಶ ನೀಡದೆ ವಾಪಸ್ ಕಳಿಸಿದರು. ಇದರಿಂದ ಚಾರಣಕ್ಕೆ ಬಂದಿದ್ದವರಿಗೆ ನಿರಾಶೆ ಆಯಿತು.ಅಕ್ರಮ ಟೆಕೆಟ್ ಪಡೆದು ಅವರನ್ನು ಚಾರಣಕ್ಕೆ ಕರೆತಂದಿದ್ದವರ ಬಗ್ಗೆ ತನಿಖೆ ನಡೆಯುವ ನಿರೀಕ್ಷೆ ಇದೆ.
ಹಿಂದಿನ ವಾರಗಳಲ್ಲಿ ಚಾರಣಕ್ಕೆ ಬಂದಿದ್ದವರ ಗುರುತಿನ ಚೀಟಿ ಬಳಸಿ ಬೆಂಗಳೂರು ಮೂಲದ ಚಾರಣ ಸಂಸ್ಥೆಗಳು ಟೆಕೆಟ್ಗಳನ್ನು ಆನ್ಲೈನ್ ಮೂಲಕ ಕಾಯ್ದಿರಿಸಿದ್ದರು. ಈ ಟೆಕೆಟ್ ಬಳಸಿ ಹೊಸದಾಗಿ ಚಾರಣಕ್ಕೆ ಬರುವವರಿಗೆ ಟೆಕೆಟ್ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
