ಕಳಸ: ಕಳಸ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಇಂದು ನಡೆದ ಸರಳ ಕಾರ್ಯಕ್ರಮದಲ್ಲಿ ಕಳಸೇಶ್ವರ ಗ್ರಾಮ ಅರಣ್ಯ ಸಮಿತಿಯು ಇಲಾಖೆಗೆ ಗಸ್ತುವಾಹನವನ್ನು ಕೊಡುಗೆಯಾಗಿ ನೀಡಿತು.10 ಲಕ್ಷ ವೆಚ್ಚದ ಮಹೇಂದ್ರ ಬೊಲೇರೋ ಪಿಕ್ ಅಪ್ ವಾಹನವನ್ನು ಶಾಸಕಿ ನಯನಾ ಮೋಟಮ್ಮ ವಲಯ ಅರಣ್ಯಾಧಿಕಾರಿ ನಿಶ್ಚಿತ್ ಗೌಡ ಅವರಿಗೆ ಹಸ್ತಾಂತರಿಸಿದರು.
ಇಲಾಖೆಗೆ ಗ್ರಾಮ ಅರಣ್ಯ ಸಮಿತಿಯು ವಾಹನ ಕೊಡುಗೆ ನೀಡಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನಯನಾ ಮೋಟಮ್ಮ, ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯ ಕೃಷಿಕರ ಹಿತದೃಷ್ಟಿಯಿಂದ ಕೆಲಸ ಮಾಡಿ ಜನರು ಮತ್ತು ವನ್ಯಮೃಗಗಳ ನಡುವಿನ ಸಂಘರ್ಷ ಕಡಿಮೆ ಮಾಡಬೇಕು ಎಂದರು. ಪ್ರವಾಸೋದ್ಯಮ ಕಳಸ ತಾಲ್ಲೂಕಿನಲ್ಲಿ ಗಮನಾರ್ಹವಾಗಿ ಬೆಳೆಯುತ್ತಿದೆ ಎಂದರು.
ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ದಿನೇಶ್, ಮಾಜಿ ಅಧ್ಯಕ್ಷ ರುದ್ರಯ್ಯ ಆಚಾರ್, ಸದಸ್ಯರಾದ ರಿಜ್ವಾನ್, ಸುಧೀರ್, ಪೂರ್ಣಿಮಾ, ಸುಮನಾ, ಉಪ ವಲಯ ಅರಣ್ಯಾಧಿಕಾರಿ ಹರೀಶ್, ಸಿಬ್ಬಂದಿ ಭಾಗವಹಿಸಿದ್ದರು.
ಇದಕ್ಕೂ ಮುನ್ನ ತಾಲ್ಲೂಕಿನಾದ್ಯಂತ ಪ್ರವಾಸ ಮಾಡಿದ ಶಾಸಕಿ ನಯನಾ ಮೋಟಮ್ಮ ಅನೇಕ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಗುದ್ದಲಿಪೂಜೆ ನೆರವೇರಿಸಿದರು.
ಮೊದಲಿಗೆ ಹಿರೇಬೈಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 20 ಲಕ್ಷ ರೂಪಾಯಿ ವೆಚ್ಚದ ಕಟ್ಟಡದ ಉದ್ಘಾಟನೆ ನೆರವೇರಿಸಿದರು.ಆನಂತರ ಅಲ್ಲಿನ 35 ಲಕ್ಷ ವೆಚ್ಚದ ಸಮುದಾಯ ಭವನವನ್ನೂ ಉದ್ಘಾಟನೆ ಮಾಡಿದರು. ಹಿರೇಬೈಲು ಕೋರೆ ಪ್ರದೇಶದ 50 ಲಕ್ಷ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆಯನ್ನೂ ನೆರವೇರಿಸಿದರು. ಕಾಂಗ್ರೆಸ್ ಮುಖಂಡರಾದ ಪ್ರಭಾಕರ್, ಶ್ರೇಣಿಕ, ವಿಶ್ವನಾಥ್, ವೀರೇಂದ್ರ, ರಫೀಕ್, ರಾಜೇಂದ್ರ, ಶುಕೂರ್, ಮಹೇಶ್ ಭಾಗವಹಿಸಿದ್ದರು.

ಆನಂತರ ಕಳಸ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೂತನ ಬ್ಲಡ್ ಬ್ಯಾಂಕ್, ಎಕ್ಸ್ರೇ ಯಂತ್ರ, ಟಿಬಿ ತಪಾಸಣಾ ಯಂತ್ರಕ್ಕೆ ಶಾಸಕಿ ಚಾಲನೆ ನೀಡಿದರು. ಆಸ್ಪತ್ರೆಯ ಸಿಬ್ಬಂದಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಜೊತೆ ಸಮಾಲೋಚನೆ ನಡೆಸಿದರು.
ಹಳ್ಳಿಗಳಿಗೆ ತೆರಳಿ ಆರೋಗ್ಯ ಸೇವೆ ನೀಡುತ್ತಿರುವ ವಾಹನ ಮತ್ತು ಸಿಬ್ಬಂದಿ ಜೊತೆ ನಯನಾ ಮೋಟಮ್ಮ ಚರ್ಚಿಸಿ ಈ ವ್ಯವಸ್ಥೆಯ ಉಪಯುಕ್ತತೆ ಬಗ್ಗೆ ಮಾಹಿತಿ ಪಡೆದುಕೊಂಡರು.ಆಡಳಿತ ವೈದ್ಯಾಧಿಕಾರಿ ಹರೀಶ್, ವೈದ್ಯಾಧಿಕಾರಿ ಕಾರ್ತಿಕ್ ಶೆಟ್ಟಿ, ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಭಾಗವಹಿಸಿದ್ದರು.
