ಕಳಸ:ಇಲ್ಲಿನ ಕಳಸ ತಾಲ್ಲೂಕು ಗಿರಿಜನ ಗೌಡಲು ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ಗೌಡಲು ಸಮುದಾಯದ ವಿದಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಜನಪದ ಕಲೆಯಾದ ಅಂಟಿಕೆ ಪಿಂಟಿಕೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ರಾಜ್ಯ ಬುಡಕಟ್ಟು ಸಂಶೋಧನಾ ಕೇಂದ್ರದ ಅಧಿಕಾರಿ ಡಾ.ಕೃಷ್ಣಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬುಡಕಟ್ಟು ಪಂಗಡಗಳ ಮಕ್ಕಳು ಉನ್ನತ ವ್ಯಾಸಂಗಕ್ಕೆ ಒತ್ತು ನೀಡಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಆಗಿದ್ದ ಧ್ವನಿ ಕಾನೂನು ಜಾಗೃತಿ ಟ್ರಸ್ಟ್ ಸಂಸ್ಥಾಪಕ ಹಾಗೂ ವಕೀಲ ಕೆ.ಎಲ್.ಕಾರ್ತಿಕ್ ಮಾತನಾಡಿ, ಬುಡಕಟ್ಟು ಜನರ ಹಕ್ಕುಗಳು ಮತ್ತು ಈ ಸಮುದಾಯದ ಏಳ್ಗೆಗೆ ಸಮಾಜದಲ್ಲಿ ಇರುವ ಅವಕಾಶಗಳ ಬಗ್ಗೆ ವಿವರಿಸಿದರು.

ಕಿರುತೆರೆ ಕಲಾವಿದ ಗಜೇಂದ್ರ ಮರಸಣಿಗೆ ಮತ್ತು ಯಕ್ಷಗಾನ ಕಲಾವಿದೆ ಗಿರಿಜಾ ಗೋಪಾಲ ಬೇಡಕ್ಕಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಅನಿಲ್ ಮುಜೇಕಾನು, ಕಾರ್ಯದರ್ಶಿ ಕುಕ್ಕೋಡು ಗಣೇಶ್, ಖಜಾಂಜಿ ಬಾಲಕೃಷ್ಣ, ಶಿಕ್ಷಕರಾದ ಶಿವಪ್ಪ, ರಾಜೇಶ್ ಮಲಗಾರು, ಸುಧಾಕರ ಹುಲ್ಲಿನುಡಿಗೆ, ಮೇಘಾನಂದ ಬೇಡಕ್ಕಿ, ದಿನೇಶ್ ಎಸ್.ಕೆ.ಮೇಗಲ್, ಸುರೇಶ್ ಕೆರ್ನಾಳಿ, ನಾಗೇಂದ್ರ ಮುಜೇಕಾನು, ರೇವತಿ, ಸುರೇಶ್ ಬಿಳಿಗಲ್, ಸತೀಶ್ ಒಡ್ಡಿಕಟ್ಟೆ ಭಾಗವಹಿಸಿದ್ದರು.
