ಕಳಸ:ಪಟ್ಟಣದ ಅರಮನೆಮಕ್ಕಿ ಮೈದಾನದಲ್ಲಿ ಕಳೆದ 9 ದಿನಗಳಿಂದ ಪೂಜಿಸಲ್ಪಟ್ಟಿದ್ದ ಸೌಹಾರ್ದ ಗಣಪತಿಯನ್ನು ಮಂಗಳವಾರ ವಿಸರ್ಜನೆ ಮಾಡಲಾಯಿತು.
ಸಂಜೆಯ ವೇಳೆಗೆ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ಅಲಂಕೃತ ವಾಹನದಲ್ಲಿ ಕೂರಿಸಲಾಯಿತು. ಅರಮನೆಮಕ್ಕಿಯಿಂದ ಮಹಾವೀರ ರಸ್ತೆ, ಕೆ.ಎಂ. ರಸ್ತೆ, ಮುಖ್ಯ ರಸ್ತೆ, ಹೊರನಾಡು ರಸ್ತೆ ಮೂಲಕ ಕಳಸೇಶ್ವರನಗರದ ಭದ್ರಾ ನದಿವರೆಗೆ ಅತ್ಯಂತ ವಿಜೃಂಭಣೆಯಿಂದ ಮೆರವಣಿಗೆ ನಡೆಸಲಾಯಿತು.
ಆಕರ್ಷಕ ವಾದ್ಯಗೋಷ್ಟಿ, ಚಂಡೆ, ನಾಸಿಕ್ಡೋಲ್ ಮೆರವಣಿಗೆಗೆ ಅಬ್ಬರದ ಹಿಮ್ಮೇಳ ಒದಗಿಸಿತ್ತು. ತುಳುನಾಡಿನ ಸಾಂಪ್ರದಾಯಿಕ ಹುಲಿವೇಷದಲ್ಲಿ ಲಯಬದ್ಧವಾಗಿ ಹೆಜ್ಜೆ ಹಾಕಿದ ಯುವಕರು ಸ್ಥಳೀಯರಲ್ಲಿ ರೋಮಾಂಚನ ತಂದರು.

ಕರಡಿ, ಚಿಂಪಾಂಜಿ, ಕಾರ್ಟೂನ್ ನಾಯಕರನ್ನು ಹೋಲುತ್ತಿದ್ದ ದೈತ್ಯ ಬೊಂಬೆಗಳು ಮಕ್ಕಳನ್ನು ಆಕರ್ಷಿಸಿದವು. ಕರಾವಳಿಯ ವಿವಿಧ ಬಗೆಯ ಅತ್ಯಾಕರ್ಷಕ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಎದ್ದು ಕಾಣುತ್ತಿದ್ದವು. ಡಿಜೆ ಸದ್ದು ಕಿವಿಗೆ ಅಡಚಿಕ್ಕುತ್ತಾ ಯುವ ಜನರನ್ನು ನೃತ್ಯದ ಉತ್ಕರ್ಷಕ್ಕೆ ಕೊಂಡೊಯ್ದಿತ್ತು.

ಭಕ್ತರು ಮನೆಮನೆಯ ಮುಂದೆ ಹಣ್ಣು ಕಾಯಿ ಸಮರ್ಪಣೆ ಮಾಡಿದರು. ಭದ್ರಾ ನದಿ ದಡದಲ್ಲಿ ನೆರೆದಿದ್ದ ಭಕ್ತರ ದಂಡು ಗಣಪತಿಯ ವಿಸರ್ಜನೆಯನ್ನು ಕಣ್ತುಂಬಿಕೊಂಡರು. ಪಟ್ಟಣದಲ್ಲಿ 9 ದಿನಗಳ ಕಾಲ ಮಿಂಚು ಹರಿಸಿದ್ದ ಸೌಹಾರ್ದ ಗಣಪತಿಯ ವಿಸರ್ಜನೆ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ರವಿ ರೈ, ಕಾರ್ಯದರ್ಶಿ ಬ್ರಹ್ಮದೇವ ಮತ್ತಿತರ ಪದಾಧಿಕಾರಿಗಳು ಭಾಗವಹಿಸಿದ್ದರು.
ಇದಕ್ಕೂ ಮುನ್ನ ಸೋಮವಾರ ರಾತ್ರಿ ನಡೆದಿದ್ದ ಸಭೆಯಲ್ಲಿ ಗಣಪತಿ ಸಭಾಭವನಕ್ಕೆ 25 ಲಕ್ಷ ದೇಣಿಗೆ ನೀಡಿದ್ದ ಉದ್ಯಮಿ ಶಶಿಧರ ಶೆಟ್ಟಿ ಬರೋಡ ಅವರನ್ನು ಸನ್ಮಾನಿಸಲಾಯಿತು. ಕಳಸದ ಸೌಹಾರ್ದ ಗಣಪತಿಯ ಉತ್ಸವದಲ್ಲಿ ಸರ್ವಧರ್ಮೀಯರು ಒಗ್ಗೂಡಿ ಪೂಜಿಸುತ್ತಿರುವುದು ವಿಶೇಷ ಎಂದು ಶಶಿಧರ ಶೆಟ್ಟಿ ಹೇಳಿದರು. ರವಿ ರೈ, ಬ್ರಹ್ಮದೇವ ಮಾತನಾಡಿದರು.
ವಿವಿಧ ಸಂಘ ಸಂಸ್ಥೆಗಳ ಮುಖಂಡರಾದ ಮಂಜಪ್ಪಯ್ಯ, ಶ್ರೇಣಿಕ, ಅಣ್ಣಯ್ಯ, ಭಾಸ್ಕರ್, ಗೋಪಾಲ ಶೆಟ್ಟಿ, ಸಂತೋಷ್, ಹಿನಾರಿ, ಕವೀಶ್,ವಿನ್ಸೆಂಟ್, ಪ್ರಸನ್ನ ಶೆಟ್ಟಿ ಭಾಗವಹಿಸಿದ್ದರು
