ಕಳಸ : ಕಾಲೇಜಿನ ಉನ್ನತೀಕರಣಕ್ಕೆ ಸ್ಥಳೀಯರು, ಕಾಲೇಜು ಅಭಿವೃದ್ಧಿ ಸಮಿತಿ ಸೇರಿದಂತೆ ಹಲವಾರು ಜನರು ಶ್ರಮಿಸುತ್ತಿದ್ದು, ವಿದ್ಯಾರ್ಥಿಗಳಾದ ತಾವು ಕಾಲೇಜಿನ ಎಲ್ಲ ಸೌಕರ್ಯ, ಸಂಪನ್ಮೂಲಗಳನ್ನು ಸದುಪಯೋಗ ಪಡಿಸಿಕೊಂಡು ಶಿಕ್ಷಣದ ಜೊತೆಗೆ ಸಂಸ್ಕಾರಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಹೊರನಾಡು ಧರ್ಮಕರ್ತ ಡಾ.ಭೀಮೇಶ್ವರ ಜೋಷಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ, ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ಹಾಗೂ ಯುವನಿಧಿ ನೋಂದಣಿ ಅಭಿಯಾನ(ಸಂಚಾರಿ ನೋಂದಣಿ) ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಕೂಡ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಅಂದಿನ ಮಟ್ಟಕ್ಕೆ ಪಠ್ಯೇತರ ಚಟುವಟಿಕೆ ಎಂದರೆ ಕೆಲವೇ ಕೆಲವು ಆಟಗಳಿಗೆ ಸೀಮಿತವಾಗಿತ್ತು, ಆದರೆ ಇಂದು ಆಟೋಟದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆ ಜೊತೆಗೆ ಕಾಲೇಜು ಗ್ರೇಡ್ ಮಟ್ಟದ ಸಾಧನೆಗಳನ್ನು ಮಾಡುತ್ತಿದೆ. ವಿದ್ಯಾರ್ಥಿಗಳು ತಮ್ಮ ಜೀವನ ಉಜ್ವಲಗೊಳ್ಳಲು ಕೈಯಲ್ಲಿನ ಮೊಬೈಲ್ ಫೋನ್ ಅನ್ನು ಶಿಕ್ಷಣಕ್ಕೆ, ತಮ್ಮ ಕೌಶಲ್ಯ ಅಭಿವೃದ್ಧಿಗೆ ಸಕಾರಾತ್ಮಕವಾಗಿ ಬಳಸಿಕೊಳ್ಳಿ ಎಂದರು.

ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ರಾಜೇಂದ್ರ ಹೆಬ್ಬಾರ್ ಹಿತ್ತಲಮಕ್ಕಿ ಮಾತನಾಡಿ, ನಮ್ಮ ಕಳಸ ಕಾಲೇಜಿನ ವಿಶೇಷವೆಂದರೆ, ಕಾಲೇಜು ವಿಭಾಗದಲ್ಲಿ ಅದರಲ್ಲೂ ಪದವಿ ಕಾಲೇಜಿನಲ್ಲಿ ಊಟ ನೀಡುತ್ತಿರುವುದು ನಮ್ಮಲ್ಲಷ್ಟೇ, ಇದಕ್ಕೆ ಕಾರಣರಾದ ಶ್ರೀ ಕ್ಷೇತ್ರ ಹೊರನಾಡು ಧರ್ಮಕರ್ತರು, ಮತ್ತು ಕಾಲೇಜು ಅಭಿವೃದ್ಧಿ ಕೆಲಸಕ್ಕೆ ಸಹಾಯ ಹಸ್ತ ಚಾಚುವ ಎಲ್ಲ ಸ್ಥಳೀಯರಿಗೂ ಧನ್ಯವಾದ ಎಂದರು.
ಕಾಲೇಜಿನಲ್ಲಿ ಬಿಎ, ಬಿಕಾಂ ಮತ್ತು ಬಿಸಿಎ ವಿಭಾಗದ ವಿವಿಧ ಸೆಮಿಸ್ಟರಗಳಲ್ಲಿ ಓದುತ್ತಿರುವ 84 ಬಡ ವಿದ್ಯಾರ್ಥಿಗಳಿಗೆ 3,71,297 ರೂ.ಗಳನ್ನು ಸಹಾಯಧನವಾಗಿ ರಾಜೇಂದ್ರ ಹೆಬ್ಬಾರ್ ಹಿತ್ತಲಮಕ್ಕಿ ನೀಡಿದ್ದು, ಕಾಲೇಜು ವತಿಯಿಂದ ಅವರಿಗೆ ಸನ್ಮಾನಿಸಲಾಯಿತು.
