ರವಿ ಕೆಳಂಗಡಿ
ಕಳಸ:ಕಳೆದ ವರ್ಷದ ಅಡಿಕೆ ಕೊಯ್ಲಿನ ವೇಳೆಗೆ ಹಸಿ ಅಡಿಕೆ ಖರೀದಿಗೆ ದಳ್ಳಾಳಿಗಳು ಮುಗಿಬಿದ್ದು ಬೆಳೆಗಾರರನ್ನು ಸಂಪರ್ಕಿಸುತ್ತಿದ್ದರು. ಆದರೆ ಈ ವರ್ಷ ದಳ್ಳಾಳಿಗಳು ಹಸಿ ಅಡಿಕೆ ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಕಳೆದ ವರ್ಷ ಕೆಜಿಗೆ 70 ರೂಪಾಯಿ ಇದ್ದ ಹಸಿ ಅಡಿಕೆ ಧಾರಣೆ ಈಗ 50 ರೂಪಾಯಿ ಒಳಗೇ ಬಂದಿದೆ.
‘ಮೂರು ವರ್ಷದಿಂದ ಎಲೆಚುಕ್ಕಿ ರೋಗದಿಂದ ಅರ್ಧಕ್ಕರ್ಧ ಅಡಿಕೆ ಫಸಲೇ ಇರಲಿಲ್ಲ. ಈ ವರ್ಷ ಹವಾಮಾನ ಅನುಕೂಲ ಮಾಡಿದ್ದರಿಂದ ಸ್ವಲ್ಪ ಅಡಿಕೆ ಫಸಲು ಕಾಣುತ್ತಿದೆ. ಆದರೆ ಅಡಿಕೆ ಕೇಳೋರೇ ಇಲ್ಲ’ ಎಂದು ಬೆಳೆಗಾರರು ಹಲುಬುತ್ತಿದ್ದಾರೆ.
‘ಹೋದ ವರ್ಷ ನಾವು ತೋಟವನ್ನು ಒಳ್ಳೆ ರೇಟಿಗೆ ಚೇಣಿಗೆ ಕೊಟ್ಟಿದ್ದೆವು. ಈ ವರ್ಷ ಚೇಣಿಗೆ ಯಾರೂ ಬರಲಿಲ್ಲ. ನಾವೇ ಜನ ಹುಡುಕಿ ಅಡಿಕೆ ತೆಗೆಸಿದರೂ ಹಸಿ ಅಡಿಕೆ ಕೊಳ್ಳುವವರೇ ಇಲ್ಲ’ ಎಂದು ಅನೇಕ ಬೆಳೆಗಾರರು ಬೇಸರದಿಂದ ಹೇಳುತ್ತಾರೆ.

ಹಸಿ ಅಡಿಕೆ ವ್ಯಾಪಾರ ಮಾಡುವ ಸುನಿಲ್ ಸಂಪಾನೆ ಅವರ ಪ್ರಕಾರ, ಈ ವರ್ಷ ಬಯಸುಸೀಮೆಯಲ್ಲಿ ಅಡಿಕೆ ಸಂಸ್ಕರಣೆ ಮಾಡುವವರಿಗೆ ಆಸಕ್ತಿ ಕಡಿಮೆ ಆಗಿದೆ.ಇಲ್ಲಿನ ಅಡಿಕೆ ಓಟ್ ಟರ್ನ್ ಬರುತ್ತಿಲ್ಲ ಎಂಬ ದೂರು ಇದೆ. ಬಯಲುಸೀಮೆಯಲ್ಲೂ ಅಡಿಕೆ ಫಸಲು ಚೆನ್ನಾಗಿದೆ. ಇದರಿಂದ ಕಳಸದಲ್ಲಿ ಹಸಿ ಅಡಿಕೆ ಬೇಡಿಕೆ ಕಡಿಮೆ ಆಗಿ ಬೆಲೆ ಕಡಿಮೆ ಆಗುತ್ತಿದೆ. 50 ರೂಪಾಯಿಗೂ ಹಸಿ ಅಡಿಕೆ ಬೇಡ ಎನ್ನುತ್ತಿದ್ದಾರೆ ಎಂದು ವಿವರಿಸುತ್ತಾರೆ.
ಕಳೆದ ವರ್ಷ ಈ ವೇಳೆಗೆ ರಾಶಿ ಇಡಿ ಕೆಂಪು ಅಡಿಕೆ ಕ್ವಿಂಟಾಲಿಗೆ 58 ಸಾವಿರ ರೂಪಾಯಿ ಬೆಲೆ ಇತ್ತು. ಈ ವರ್ಷ ಆ ಧಾರಣೆ 46 ಸಾವಿರ ಆಸುಪಾಸಿನಲ್ಲಿ ಇದೆ. ಅಡಿಕೆ ಸಂಸ್ಕರಣೆಗೇ ಕ್ವಿಂಟಾಲಿಗೆ 10 ಸಾವಿರ ರೂಪಾಯಿ ವೆಚ್ಚ ಆಗುತ್ತದೆ. ಜೊತೆಗೆ ಈ ವರ್ಷ ಕಾರ್ಮಿಕರ ಲಭ್ಯತೆಯೂ ಬಹಳ ಕಡಿಮೆ ಇದೆ. ಈ ಸವಾಲುಗಳನ್ಲೆಲ್ಲಾ ಮೀರಿ ಅಡಿಕೆ ಕೊಯ್ಲು ಮಾಡುವ ಅಡಿಕೆ ಬೆಳೆಗಾರರಿಗೆ ಬೆಲೆ ಕುಸಿತ ಆಗಿರುವುದು ಭ್ರಮಾನಿರಸನ ಮೂಡಿಸಿದೆ.
ಕಳೆದ ಹಲವಾರು ವರ್ಷಗಳಿಂದ ಹಸಿ ಅಡಿಕೆ ಧಾರಣೆ ಏರಿದ್ದರಿಂದ ಮನೆಯಲ್ಲಿ ಕೆಂಪು ಅಡಿಕೆ ಸಂಸ್ಕರಣೆಯನ್ನೇ ಬೆಳೆಗಾರರು ಬಿಟ್ಟಿದ್ದರು. ಆದರೆ ಈ ವರ್ಷ ಅತ್ತ ಹಸಿ ಅಡಿಕೆ ಧಾರಣೆಯೂ ಇಲ್ಲ, ಇತ್ತ ಕೆಂಪು ಅಡಿಕೆ ಸಂಸ್ಕರಣೆ ಮಾಡಿ ಶೇಖರಿಸುವ ವ್ಯವಸ್ಥೆಯೂ ಇಲ್ಲ. ಇದರಿಂದ ಕಡಿಮೆ ಧಾರಣೆಗೇ ಹಸಿ ಅಡಿಕೆ ಮಾರಾಟ ಮಾಡಬೇಕಾದ ಅನಿವಾರ್ಯತೆ ಬೆಳೆಗಾರರಿಗೆ ಎದುರಾಗಿದೆ.

