ಕಳಸ: ಬೇಲೂರು ತಾಲ್ಲೂಕಿನಲ್ಲಿ ಪುಂಡಾಟ ನಡೆಸುತ್ತಿದ್ದ ಕಾಡಾನೆಗಳ ಹಿಂಡನ್ನು ಮೂಡಿಗೆರೆ ತಾಲೂಕಿಗೆ ಸ್ಥಳಾಂತರ ಮಾಡಿರುವ ಬಗ್ಗೆ ತಮ್ಮ ಅಸಮಾಧಾನ ಮತ್ತು ಆಕ್ರೋಶ ಹೊರಹಾಕಿರುವ ಶಾಸಕಿ ನಯನಾ ಮೋಟಮ್ಮ ಶಾಸಕಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧತೆ ನಡೆಸಿದ್ದಾರೆ.
ಬೇಲೂರು ತಾಲ್ಲೂಕಿನ 60 ಕಾಡಾನೆಗಳನ್ನು ಚಿಕ್ಕಮಗಳೂರು ಜಿಲ್ಲೆಯ ಯಾವುದೇ ಜನಪ್ರತಿನಿಧಿ ಜೊತೆ ಸಮಾಲೋಚನೆ ನಡೆಸದೆ ಮೂಡಿಗೆರೆ ತಾಲ್ಲೂಕಿನ ತತ್ಕೊಳ ಅರಣ್ಯಕ್ಕೆ ಸ್ಥಳಾಂತರಿಸುವ ಕೆಲಸ ನಡೆದಿದೆ. ಈಗಾಗಲೇ 30 ಆನೆಗಳು ಇಲ್ಲಿಗೆ ಭಾನುವಾರ ಬೆಳಗಿನ ಜಾವ ಬಂದಿವೆ. ನನಗೆ ಮಾಹತಿ ನೀಡದೆ ಆನೆಗಳನ್ನು ಇಲ್ಲಿಗೆ ತಂದಿರುವುದು ಖಂಡನೀಯ ಮತ್ತು ಅರಣ್ಯ ಇಲಾಖೆಯ ದ್ರೋಹದ ಕೆಲಸ ಎಂದು ನಯನ ಮೋಟಮ್ಮ ತಿಳಿಸಿದ್ದಾರೆ.
ಮೂಡಿಗೆರೆ ಕ್ಷೇತ್ರದ ಜನರು ಈಗಾಗಲೇ ಕಾಡುಕೋಣಗಳ ಹಾವಳಿಯಿಂದ ಬಹಳಷ್ಟು ನೊಂದಿದ್ದಾರೆ.ಅನೇಕ ಜೀವ ಹೋಗಿವೆ, ಬಹಳಷ್ಟು ಕೃಷಿ ಭೂಮಿಗೆ ಹಾನಿಯೂ ಆಗಿದೆ.ನಮ್ಮ ಕ್ಷೇತ್ರದಲ್ಲಿ ಈಗಾಗಲೇ ಇರುವ ಆನೆಗಳ ಹಾವಳಿ ಕೂಡ ಚಿಂತೆ ತಂದಿದೆ. ಇನ್ನಷ್ಟು ಕಾಡಾನೆಗಳನ್ನು ಇಲ್ಲಿಗೆ ತಂದು ಮಾನವ ಮತ್ತು ವನ್ಯಜೀವಿ ಸಂಘರ್ಷಕ್ಕೆ ಅರಣ್ಯ ಇಲಾಖೆಯೇ ಕಾರಣ ಆಗುತ್ತಿದೆ ಎಂದು ಶಾಸಕಿ ದೂರಿದ್ದಾರೆ.

ಮೂಡಿಗೆರೆ ಕ್ಷೇತ್ರಕ್ಕೆ ಬಂದಿರುವ ಆನೆಗಳು ಒಂದೆರಡು ದಿನದಲ್ಲಿ ವಿವಿಧೆಡೆ ಚದುರಿ ಹೋದರೆ ಕೃಷಿ ಭೂಮಿ ಹಾನಿ ಆಗುತ್ತದೆ.ಸ್ಥಳೀಯರಲ್ಲಿ ಈಗಾಗಲೇ ಚಿಂತೆ ಮೂಡಿದ್ದು ಆಕ್ರೋಶವನ್ನೂ ಹೊರಹಾಕುತ್ತಿದ್ದಾರೆ. ಆನೆಗಳು ತತ್ಕೊಳ ಅರಣ್ಯಕ್ಕೆ ಬರುವ ಮಾರ್ಗದಲ್ಲಿ ಸಣ್ಣ ಬೆಳೆಗಾರರ ಕೃಷಿ ಭೂಮಿ ಇದ್ದು ಅವನತಿ ಆಗುತ್ತದೆ.ಪ್ರವಾಸೋದ್ಯಮಕ್ಕೂ ಇದರಿಂದ ಹಾನಿ ಆಗುತ್ತದೆ ಎಂದು ನಯನಾ ಮೋಟಮ್ಮ ವಿವರಿಸಿದ್ದಾರೆ.
ನನ್ನ ಕ್ಷೇತ್ರದ ಜನರ ಪ್ರಾಣ, ಆಸ್ತಿಪಾಸ್ತಿ ರಕ್ಷಿಸುವುದು ನನ್ನ ಕರ್ತವ್ಯ. ಆದರೆ ಅರಣ್ಯ ಇಲಾಖೆಯ ಈ ಜನವಿರೋಧಿ ಧೋರಣೆ ಕಂಡು ಬೇಸರ ಆಗಿದೆ. ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ಬಾರದಂತೆ ಇಷ್ಟು ದೊಡ್ಡ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ನಡವಳಿಕೆ ಖಂಡಿಸಿ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದೇನೆ ಎಂದು ಅವರು ತಿಳಿಸಿದ್ದಾರೆ.
