ಕಳಸ:ಶಾಸಕಿ ನಯನಾ ಮೋಟಮ್ಮ ಇದೇ 21ರ ಶನಿವಾರ ಕಳಸ ತಾಲ್ಲೂಕಿನಲ್ಲಿ ಪ್ರವಾಸ ಕೈಗೊಂಡು ಹಲವಾರು ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ಮತ್ತು ಉದ್ಘಾಟನೆ ಮಾಡಲಿದ್ದಾರೆ.
ಮೊದಲಿಗೆ ಹೊರನಾಡು ಬಲಿಗೆ ರಸ್ತೆಯ ಮೇಲುಮಂಚಿಗೆಯಲ್ಲಿ 1 ಕೋಟಿ ವೆಚ್ಚದ ಸೇತುವೆಗೆ ಗುದ್ದಲಿಪೂಜೆ ನೆರವೇರಲಿದೆ. ಆನಂತರ ಕಳಕೋಡು-ಕಾರ್ಲೆ ಗ್ರಾಮದ 50 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕಿ ಚಾಲನೆ ನೀಡಲಿದ್ದಾರೆ.
50 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಕಳಸ ಪಶು ಆಸ್ಪತ್ರೆಯ ನೂತನ ಕಟ್ಟಡವನ್ನು ನಯನಾ ಮೋಟಮ್ಮ ಉದ್ಘಾಟಿಸಲಿದ್ದಾರೆ.ಮಧ್ಯಾಹ್ನ ಕಳಸೇಶ್ವರ ದೇವಸ್ಥಾನದಲ್ಲಿ ಗಿರಿಜಾ ಕಲ್ಯಾಣ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ.
ಆನಂತರ ಬಾಳೆಹೊಳೆಯಲ್ಲಿ 2 ಕೋಟಿ ವೆಚ್ಚದ ಕಳಸ-ಬಾಳೆಹೊಳೆ ರಸ್ತೆ ಅಭಿವೃದ್ಧಿಗೆ ಗುದ್ದಲಿಪೂಜೆ ನಡೆಯಲಿದೆ.ಆನಂತರ ಕೋಟೆಮಕ್ಕಿಯ 1 ಕೋಟಿ ವೆಚ್ಚದ ರಸ್ತೆಗೆ ಗುದ್ದಲಿಪೂಜೆ ನಡೆಯಲಿದ್ದು ಸಂಜೆ ಮಾಳಿಂಗನಾಡು-ನೇರಂಕಿ ರಸ್ತೆಯ 2 ಕೋಟಿ ವೆಚ್ಚದ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಿದ್ದಾರೆ ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.
