ಕಳಸ:ತಾಲ್ಲೂಕಿನ ವಿವಿಧ ರಸ್ತೆ ಮತ್ತು ಸೇತುವೆ ಕಾಮಗಾರಿಗಳಿಗೆ ಶಾಸಕಿ ನಯನಾ ಮೋಟಮ್ಮ ಶನಿವಾರ ಗುದ್ದಲಿಪೂಜೆ ನೆರವೇರಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ತುಂಬಿದರು.
ಪಟ್ಟಣದಲ್ಲಿ ಪಶು ಆಸ್ಪತ್ರೆಯ 50 ಲಕ್ಷ ವೆಚ್ಚದ ನೂತನ ಕಟ್ಟಡ ಉದ್ಘಾಟನೆಯ ನಂತರ ಸ್ಥಳೀಯರು ಶಾಸಕಿ ಜೊತೆಗೆ ಸಮಾಲೋಚನೆ ನಡೆಸಿದರು. ಹೈನುಗಾರರಿಗೆ ಅನುಕೂಲ ಆಗುವಂತೆ ಮಿಲ್ಕ್ ರೂಟ್ ವಿಸ್ತರಿಸುವಂತೆ ಶಾಸಕಿ ನಯನಾ ಮೋಟಮ್ಮ ಅವರನ್ನು ಗ್ರಾಮಸ್ಥರು ಶನಿವಾರ ಒತ್ತಾಯಿಸಿದರು.

ಕಳಸ ತಾಲ್ಲೂಕಿನಲ್ಲಿ ಅನೇಕ ರೈತರು, ಮಹಿಳೆಯರು ಹಸುಗಳನ್ನು ಸಾಕುತ್ತಿದ್ದರೂ ಹಾಲಿಗೆ ಬೇಡಿಕೆ ಇಲ್ಲದೆ ಆದಾಯ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಹಾಲು ಸಂಗ್ರಹಣೆಗೆ ಮೂಡಿಗೆರೆವರೆಗೆ ಇರುವ ಮಿಲ್ಕ್ ರೂಟ್ ಅನ್ನು ಕಳಸದವರೆಗೂ ವಿಸ್ತರಿಸಬೇಕು ಎಂದು ಹಿತ್ತಲಮಕ್ಕಿ ರಾಜೇಂದ್ರ ಶಾಸಕರ ಗಮನ ಸೆಳೆದರು.
ಕಳಸದಲ್ಲಿ ಜಾನುವಾರುಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಪಾಲನೆ ಮಾಡುವವರೇ ಇಲ್ಲದೆ ಬೀದಿಗೆ ಬರುತ್ತಿವೆ. ಇವುಗಳಿಗೆ ಆಶ್ರಯ ನೀಡಲು ಗೋಶಾಲೆ ಸ್ಥಾಪಿಸಬೇಕು ಎಂದು ಕೆ.ಆರ್.ಪ್ರಭಾಕರ್ ಕೋರಿದರು. ಈ ಬಗ್ಗೆ ಪರಿಶೀಲನೆ ಮಾಡುತ್ತೇನೆ ಎಂದು ಶಾಸಕಿ ಭರವಸೆ ನೀಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೇಣಿಕ, ಮುಖಂಡರಾದ ವಿಶ್ವನಾಥ್, ವೀರೇಂದ್ರ, ಗಣೇಶ್ ಭಟ್, ಶುಕೂರ್, ಭರತ್ರಾಜ್, ಪಶು ವೈದ್ಯ ಡಾ,ವಿನಂತ್, ಸಿಬ್ಬಂದಿಗಳಾದ ಜಯಣ್ಣ, ನಾಗೇಂದ್ರ ಮತ್ತಿತರರು ಭಾಗವಹಿಸಿದ್ದರು. ಇದಕ್ಕೂ ಮುನ್ನ ಹೊರನಾಡು-ಬಲಿಗೆ ರಸ್ತೆಯಲ್ಲಿ 1 ಕೋಟಿ ವೆಚ್ಚದ ಸೇತುವೆಗೆ ಮತ್ತು 50 ಲಕ್ಷ ವೆಚ್ಚದ ಕಳಕೋಡು-ಕಾರ್ಲೆ ರಸ್ತೆಗೆ ಶಾಸಕಿ ಗುದ್ದಲಿಪೂಜೆ ನೆರವೇರಿಸಿದರು.
ಆನಂತರ ಕಳಸದಲ್ಲಿ ಗಿರಿಜಾ ಕಲ್ಯಾಣದ ಸಡಗರವನ್ನು ಕಳಸೇಶ್ವರ ದೇವಸ್ಥಾನದಲ್ಲಿ ಶಾಸಕಿ ಕಣ್ತುಂಬಿಕೊಂಡರು. 2 ಕೋಟಿ ವೆಚ್ಚದ ಬಾಳೆಹೊಳೆ-ಮಾಗುಂಡಿ ರಸ್ತೆ, 1 ಕೋಟಿ ವೆಚ್ಚದ ಕೋಟೆಮಕ್ಕಿ ರಸ್ತೆ ಮತ್ತು 2 ಕೋಟಿ ವೆಚ್ಚದ ನೇರಂಕಿ-ಮಾಳಿಂಗನಾಡು ರಸ್ತೆಗೂ ಶಾಸಕಿ ಗುದ್ದಲಿಪೂಜೆ ನೆರವೇರಿಸಿದರು.
