ಕಳಸ:ಸೋಮವಾರ ಮಧ್ಯಾಹ್ನ 12ರ ವೇಳೆಗೆ ಶಾಸಕರ ಕಚೇರಿಗೆ ಯೋಧ ರಾಜಪ್ಪ ತಲುಪಿದ ಬೆನ್ನಲ್ಲೇ ಒಬ್ಬ ಅಶಕ್ತ ಮಹಿಳೆ ಮತ್ತು ಆಕೆಯ ಅಂಗವಿಕಲ ಮಗಳನ್ನು ಆಟೊದಲ್ಲಿ ಕರೆತರಲಾಯಿತು.ಇದು ನೆರೆದಿದ್ದವರ ಕುತೂಹಲ ಕೆರಳಿತ್ತು.
ಶಾಸಕಿ ನಯನಾ ಮೋಟಮ್ಮ ಬಂದೊಡನೇ ಲಗುಬಗನೆ ಸಣ್ಣ ಕಾರ್ಯಕ್ರಮ ಶುರು ಆಯಿತು. ಕಳಸ ಯುವಕ ಸಂಘವು ಆಪರೇಶನ್ ಸಿಂಧೂರದಲ್ಲಿ ಭಾಗವಹಿಸಿ ಗಾಯಗೊಂಡ ಬಿಎಸ್ಎಫ್ ಯೋಧ ರಾಜಪ್ಪ ಅವರಿಗೆ 25 ಸಾವಿರ ರೂಪಾಯಿ ಧನ ಸಹಾಯ ಮಾಡಿ ಗೌರವಿಸಿತು. ಶಾಸಕಿ ನಯನಾ ಮೋಟಮ್ಮ ಕೂಡ ಯೋಧನನ್ನು ಗೌರವಿಸಿ ಅಭಿನಂದನೆಯ ಮಾತಾಡಿದರು.
ಆನಂತರ ಶಿವನಗರದ ಪಾಶ್ರ್ವವಾಯು ಪೀಡಿತ ವೃದ್ಧೆ ಲಕ್ಷ್ಮಮ್ಮ ಮತ್ತು ಆಕೆಯ ಅಂಗವಿಕಲ ಮಗಳಿಗೆ ನೆರವಾಗಲೆಂದು ಅವರ ಮನೆಯಲ್ಲಿ ಶೌಚಾಲಯ ಮತ್ತು ಸ್ನಾನದ ಮನೆ ನಿರ್ಮಿಸಲು ಕಳಸ ಯುವಕ ಸಂಘ 20 ಸಾವಿರ ರೂಪಾಯಿ ನೆರವನ್ನು ಹಸ್ತಾಂತರ ಮಾಡಿತು.

‘ಜನಪ್ರತಿನಿಧಿಗಳು ಮಾಡಬೇಕಾದ ಕೆಲಸವನ್ನು ಕಳಸ ಯುವಕ ಸಂಘ ಮಾಡುತ್ತಿದ್ದು ನಮ್ಮನ್ನು ಇನ್ನಷ್ಟು ಕೆಲಸ ಮಾಡುವಂತೆ ಪ್ರೇರಣೆ ಕೊಡುತ್ತಿದೆ.ಯುವಕ ಸಂಘಕ್ಕೆ ಭವಿಷ್ಯದಲ್ಲಿ ಏನಾದರೂ ನೆರವು ಬೇಕಿದ್ದರೆ ನಾನು ಸದಾ ಜೊತೆಗೆ ಇರುತ್ತೇನೆ’ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಕಳಸ ಯುವಕ ಸಂಘದ ಕಟ್ಟಡಕ್ಕೆ 4 ಲಕ್ಷ ರೂಪಾಯಿ ಅನುದಾನ ಕೊಟ್ಟಿರುವ ಶಾಸಕರನ್ನು ಇದೇ ಸಂದರ್ಭದಲ್ಲಿ ಯುವಕ ಸಂಘದ ಸದಸ್ಯರು ಸನ್ಮಾನಿಸಿದರು.ಯುವಕ ಸಂಘದ ಅಧ್ಯಕ್ಷ ಯೋಗೀಶ್ ಭಟ್, ಕಾರ್ಯದರ್ಶಿ ವೀರೇಂದ್ರ, ಸದಸ್ಯರಾದ ವಾಸುದೇವ, ಥಾಮಸ್, ಸತ್ಯೇಂದ್ರ, ಮೆಲ್ವಿನ್, ಕೃಷ್ಣಮೂರ್ತಿ, ರಾಘವೇಂದ್ರ, ಅರುಣ, ಸದಾನಂದ, ಅನಿಲ್ ಮತ್ತಿತರರು ಭಾಗವಹಿಸಿದ್ದರು.
