ಕಳಸ:ಬಹು ನಿರೀಕ್ಷೆಯ ಕಳಸ ತಾಲ್ಲೂಕು ಕಚೇರಿಯ ಕಾಮಗಾರಿಗೆ ಶುಕ್ರವಾರ ಶಾಸಕಿ ನಯನ ಮೋಟಮ್ಮ ಗುದ್ದಲಿಪೂಜೆ ಮಾಡಲಿದ್ದಾರೆ.
ಕಳಸ ತಾಲ್ಲೂಕು ಕೇಂದ್ರ ಘೋಷಣೆ ಆಗಿ 4 ವರ್ಷ ಕಳೆದಿದ್ದರೂ ತಾಲ್ಲೂಕು ಕಚೇರಿ ತಾತ್ಕಾಲಿಕವಾಗಿ ನಾಡಕಚೇರಿಯ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿತ್ತು.ಶಾಸಕಿ ನಯನಾ ಮೋಟಮ್ಮ ಸತತ ಪ್ರಯತ್ನದ ನಂತರ ತಾಲ್ಲೂಕು ಕಚೇರಿಗೆ ರಾಜ್ಯ ಸರ್ಕಾರ 5 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಎರಡು ಮಹಡಿಯ ಕಟ್ಟಡಕ್ಕೆ ಶಾಸಕಿ ಬೆಳಿಗ್ಗೆ 11.15ಕ್ಕೆ ಗುದ್ದಲಿಪೂಜೆ ನೆರವೇರಿಸಲಿದ್ದಾರೆ ಎಂದು ಕಳಸ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೇಣಿಕ ಮಾಹಿತಿ ನೀಡಿದ್ದಾರೆ.
ಈ ತಾಲ್ಲೂಕು ಕಚೇರಿ ಕಟ್ಟಡದಲ್ಲಿ ತಹಶೀಲ್ದಾರ್ ಕಚೇರಿ, ಕಂದಾಯ ಇಲಾಖೆ ಸುಪರ್ದಿಗೆ ಒಳಪಡುವ ಭೂಮಿ ಕೇಂದ್ರ, ಭೂ ದಾಖಲೆಗಳ ಕಚೇರಿ, ಆಹಾರ ಇಲಾಖೆ ಕಚೇರಿ ಮತ್ತಿತರ ಕಚೇರಿಗಳು ಕಾರ್ಯನಿರ್ವಹಿಸಲಿವೆ. 36 ಗುಂಟೆ ಪ್ರದೇಶದಲ್ಲಿ ನೆಲ ಸಮತಟ್ಟು ಮಾಡಲಾಗುತ್ತಿದ್ದು ಅತಿ ಶೀಘ್ರದಲ್ಲೇ ಕಾಮಗಾರಿ ಆರಂಭವಾಗುವ ಸೂಚನೆ ಇದೆ.

ಇದಕ್ಕೂ ಮುನ್ನ ಕಳಸೇಶ್ವರ ದೇವಸ್ಥಾನದ ಬಳಿ ಬೆಳಿಗ್ಗೆ 11 ಗಂಟೆಗೆ 1 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೂ ಶಾಸಕಿ ಚಾಲನೆ ನೀಡಲಿದ್ದಾರೆ. 12 ಗಂಟೆಗೆ ಕೆಪಿಎಸ್ ಶಾಲೆಯಲ್ಲಿ ನೂತನ ಕೊಠಡಿಗಳ ಉದ್ಘಾಟನೆಯನ್ನೂ ಶಾಸಕಿ ನೆರವೇರಿಸಲಿದ್ದಾರೆ.
ಆನಂತರ ಕಳಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೊಸ ಕೊಠಡಿ ಉದ್ಘಾಟನೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಹಿತ್ತಲಮಕ್ಕಿ ರಾಜೇಂದ್ರ ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಿರುವ ಸಹಾಯಧನವನ್ನೂ ಶಾಸಕಿ ಹಸ್ತಾಂತರ ಮಾಡಲಿದ್ದಾರೆ.
