ಕಳಸ:ಕಳಸ ತಾಲ್ಲೂಕಿನ ವಿವಿಧೆಡೆಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಇದೇ ಸೆಪ್ಟೆಂಬರ್ 4ರಂದು ವಾಹನಗಳ ಜಾಥಾ ನಡೆಯಲಿದೆ.
ಅಂದು ಬೆಳಿಗ್ಗೆ 9 ಗಂಟೆಗೆ ಕಳಸೇಶ್ವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಜಾಥಾ ಆರಂಭಿಸಲಾಗುತ್ತದೆ. ಕಳಸ ತಾಲ್ಲೂಕಿನ 500ಕ್ಕೂ ಹೆಚ್ಚು ವಾಹನಗಳಲ್ಲಿ ಧರ್ಮಸ್ಥಳಕ್ಕೆ ತೆರಳಿ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಆನಂತರ ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಲಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಭಕ್ತ ವೃಂದದ ಪರವಾಗಿ ಮುಖಂಡ ಕೆ.ಸಿ.ಧರಣೇಂದ್ರ ತಿಳಿಸಿದ್ದಾರೆ.
ಧರ್ಮಸ್ಥಳ ಕ್ಷೇತ್ರದ ಬಗ್ಗೆ ನಡೆಯುತ್ತಿರುವ ಅಪಪ್ರಚಾರ ಖಂಡಿಸಿ ಈ ಜಾಥಾ ಆಯೋಜಿಸಲಾಗಿದೆ.ಧರ್ಮಸ್ಥಳದ ಡಿ.ವೀರೇಂದ್ರ ಹೆಗ್ಗಡೆಯವರ ಜೊತೆಗೆ ಎಂದೆಂದಿಗೂ ನಾವು ಇದ್ದೇವೆ ಎಂಬ ಸಂದೇಶ ಕೊಡಲು ಈ ಜಾಥಾ ನೆಪವಾಗಲಿದೆ ಎಂದೂ ಧರಣೇಂದ್ರ ತಿಳಿಸಿದ್ದಾರೆ.

ನೂರಾರು ವರ್ಷಗಳಿಂದ ಧಾರ್ಮಿಕ ಮತ್ತು ಸಾಮಾಜಿಕ ಸೇವೆ ಮಾಡುತ್ತಿರುವ ಧರ್ಮಸ್ಥಳ ಕ್ಷೇತ್ರಕ್ಕೆ ದಕ್ಷಿಣ ಭಾರತದಲ್ಲೇ ಸರಿಸಾಟಿಯಾದ ಯಾವುದೇ ಕ್ಷೇತ್ರ ಇಲ್ಲ. ಗ್ರಾಮಾಭಿವೃದ್ಧಿ ಯೋಜನೆ ಮೂಲಕ ರಾಜ್ಯದ ಕೋಟ್ಯಂತರ ಜನರ ಬದುಕಿಗೆ ಆರ್ಥಿಕ ಸ್ವಾತಂತ್ರ್ಯ ತಂದ ಇಂತಹ ಸಂಸ್ಥೆ ಬಗ್ಗೆ ಎದ್ದಿರುವ ಅಪಪ್ರಚಾರವನ್ನು ನಾವು ಖಂಡಿಸಬೇಕಿದೆ. ಧರ್ಮಸ್ಥಳದ ಪಾವಿತ್ರ್ಯತೆ ಕೆಡಿಸುವ ಮಾತುಗಳು ಮತ್ತು ಆರೋಪಗಳ ಬಗ್ಗೆ ಜಾಗೃತರಾಗಬೇಕಿದೆ. ಅದನ್ನು ಖಂಡಿಸುವ ಜೊತೆಗೆ ಸೂಕ್ತ ಕಾನೂನು ಕ್ರಮಕ್ಕಾಗಿ ಆಗ್ರಹ ಕೂಡ ಮಾಡಬೇಕಿದೆ ಎಂದೂ ಧರಣೇಂದ್ರ ತಿಳಿಸಿದರು.
ಗುರುವಾರದ ವಾಹನ ಜಾಥಾದಲ್ಲಿ ತಾಲ್ಲೂಕಿನ ಎಲ್ಲ ಧರ್ಮಸ್ಥಳ ಭಕ್ತರು ಕೂಡ ಭಾಗವಹಿಸಬೇಕು. ಹೆಗ್ಗಡೆಯವರಲ್ಲಿ ನಮ್ಮ ವಿಶ್ವಾಸ ಪ್ರಕಟಿಸಲು ಇದು ಸದವಕಾಶ ಎಂದು ತಿಳಿದು ಜಾಥಾದಲ್ಲಿ ಭಾಗವಹಿಸಿ ಎಂದೂ ಧರಣೇಂದ್ರ ಕೋರಿದ್ದಾರೆ.
