ಕಳಸ:ಕುದುರೆಮುಖ ಪೊಲೀಸ್ ಸಿಬ್ಬಂದಿ ಜೊತೆ ತಿಕ್ಕಾಟದ ನಂತರದ ಬೆಳವಣಿಗೆಯಲ್ಲಿ ಕಳೆದ ಗುರುವಾರ ಆತ್ಮಹತ್ಯೆ ಮಾಡಿಕೊಂಡ ಸಂಸೆಯ ದಲಿತ ಯುವಕ ನಾಗೇಶ್ ಸಾವಿಗೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕು ಎಂದು ರಾಜ್ಯ ನಾಗರೀಕ ಹಕ್ಕುಗಳ ರಕ್ಷಣಾ ಸಂಘ ಒತ್ತಾಯಿಸಿದೆ.
ಸಂಘದ ಮುಖಂಡರೂ, ಹೈಕೋರ್ಟ್ ವಕೀಲರೂ ಆದ ಅಖಿಲ ವಿದ್ಯಾಚಂದ್ರ, ನಯಾಜ್, ಪದಾಧಿಕಾರಿಗಳಾದ ಸಂಜಯ್, ವಸೀಮ್, ಜಿಲ್ಲಾ ಕಾರ್ಯದರ್ಶಿ ಲಿಂಗಪ್ಪ, ಮೊಹಮ್ಮದ್ ಸಮೀಉಲ್ಲಾ, ದಲಿತ ಸಂಘರ್ಷ ಸಮಿತಿಯ ಆಶಾ ಸಂತೋಷ್ ಒಳಗೊಂಡ ತಂಡ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಟಾಧಿಕಾರಿ ಅವರನ್ನು ಭೇಟಿ ಮಾಡಿ ಈ ಬೇಡಿಕೆ ಸಲ್ಲಿಸಿದೆ.ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದರ ಜೊತೆಗೆ ಆತನ ಕುಟುಂಬಕ್ಕೆ ಸೂಕ್ತ ಪರಿಹಾರ, ಪತ್ನಿಗೆ ಉದ್ಯೋಗ ನೀಡಬೇಕು ಎಂದು ರಕ್ಷಣಾ ಸಂಘ ಆಗ್ರಹಿಸಿದೆ.
ನಾಗೇಶ್ ಸಾವಿಗೆ ಕಾರಣರಾದವರನ್ನು ಕೂಡಲೇ ಬಂಧಿಸಿ ಸೂಕ್ತ ಕ್ರಮ ವಹಿಸಬೇಕು.ಇದೇ ಪ್ರಕರಣದಲ್ಲಿ ಕುದುರೆಮುಖ ಠಾಣಾಧಿಕಾರಿ ಆದರ್ಶ ಕೂಡ ತಪ್ಪಿತಸ್ಥರಾಗಿದ್ದು ಅವರನ್ನು ಕೂಡ ಅಮಾನತು ಮಾಡಬೇಕು ಎಂದು ನಿಯೋಗ ಪೊಲೀಸ್ ವರಿಷ್ಟಾಧಿಕಾರಿಯನ್ನು ಒತ್ತಾಯಿಸಿದೆ.

ಡಿವೈಎಸ್ಪಿ ಬಾಲಾಜಿ ಸಿಂಗ್ ಜೊತೆ ಕಳಸ ಪೊಲೀಸ್ ಠಾಣೆಯಲ್ಲಿ ಈ ನಿಯೋಗ ಸಮಾಲೋಚನೆ ನಡೆಸಿ ಪೊಲೀಸ್ ಕಾನ್ಸ್ ಟೇಬಲ್ ಸಿದ್ದೇಶ್ ಮತ್ತು ಇತರೆ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿತು. ಆರೋಪಿಗಳನ್ನು ಬಂಧಿಸದಿದ್ದರೆ ಹೋರಾಟ ಮಾಡುತ್ತೇವೆ ಎಂದೂ ನಿಯೋಗ ಎಚ್ಚರಿಸಿತು.
ನಾಗೇಶ್ ಸಾವಿಗೆ ನ್ಯಾಯ ಕೊಡಿಸುವ ಬಗ್ಗೆ ಮತ್ತು ಕುಟುಂಬಕ್ಕೆ ಪರಿಹಾರಧನ ಮತ್ತು ಪತ್ನಿಗೆ ಸರ್ಕಾರಿ ಉದ್ಯೋಗ ಕೊಡಿಸಲು ಹೋರಾಟ ಮುಂದುವರೆಸುತ್ತೇವೆ ಎಂದು ನಾಗರೀಕ ಹಕ್ಕುಗಳ ರಕ್ಷಣಾ ಸಂಘದ ಜಿಲ್ಲಾ ಕಾರ್ಯದರ್ಶಿ ಲಿಂಗಪ್ಪ ತಿಳಿಸಿದರು.
