ಕಳಸ:ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳ ಸಂಸ್ಕಾರ ನಡೆದಿದೆ ಎಂಬ ಸುದ್ದಿ ಹಬ್ಬಿಸಿ ಕ್ಷೇತ್ರದ ಬಗ್ಗೆ ಅಪಪ್ರಚಾರ ನಡೆಸುತ್ತಿರುವ ಎಲ್ಲರ ವಿರುದ್ಧ ಕಾನೂನು ಕ್ರಮ ವಹಿಸಬೇಕು ಎಂದು ಪಟ್ಟಣದಲ್ಲಿ ಧರ್ಮಸ್ಥಳದ ಭಕ್ತರು ಒತ್ತಾಯಿಸಿದರು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಭಾನುವಾರ ಧರ್ಮಸ್ಥಳದ ಭಕ್ತರು ಭಾರಿ ಮಳೆ ನಡುವೆಯೂ ಜಾಗ್ರತಾ ಸಮಾವೇಶ ನಡೆಸಿದರು. ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ಜನರು ತಾಲ್ಲೂಕು ಕಚೇರಿಗೆ ಸಾಗಿ ತಹಶೀಲ್ದಾರ್ ಕಾವ್ಯ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಧರ್ಮಸ್ಥಳ ಕ್ಷೇತ್ರದ ವೀರೇಂದ್ರ ಹೆಗ್ಗಡೆ ಕುಟುಂಬದ ವಿರುದ್ಧ ನಡೆಯುತ್ತಿರುವ ಅವಹೇಳನ, ಪಿತೂರಿ ಮತ್ತು ಷಡ್ಯಂತ್ರ ವಿರುದ್ಧ ಸೂಕ್ತಕ್ರಮ ವಹಿಸುವಂತೆ ಮುಖ್ಯಮಂತ್ರಿಗಳನ್ನು ಪತ್ರದ ಮೂಲಕ ಒತ್ತಾಯಿಸಲಾಯಿತು.
ಧರ್ಮಸ್ಥಳ ಕ್ಷೇತ್ರವು ತನ್ನ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಲಕ್ಷಾಂತರ ಕುಟುಂಬಗಳಿಗೆ ಆರ್ಥಿಕ ಚೈತನ್ಯ ತುಂಬಿದೆ. ಲೆಕ್ಕವಿಲ್ಲದಷ್ಟು ದೇಗುಲಗಳ ಜೀರ್ಣೋದ್ಧಾರ ಮಾಡಿರುವ ಈ ಕ್ಷೇತ್ರ, ಲಕ್ಷಾಂತರ ಮಕ್ಕಳಿಗೆ ವಿದ್ಯಾದಾನ ಮಾಡಿದೆ.
ಇಷ್ಟೆಲ್ಲಾ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ ವೀರೇಂದ್ರ ಹೆಗ್ಗಡೆ ಮತ್ತು ಧರ್ಮಸ್ಥಳ ಕ್ಷೇತ್ರದ ವಿರುದ್ಧ ವ್ಯವಸ್ಥಿತ ಪಿತೂರಿ ಮತ್ತು ಷಡ್ಯಂತ್ರ ರೂಪಿಸಲಾಗಿದೆ. ಇದರಿಂದ ಕ್ಷೇತ್ರದ ಭಕ್ತರು ಮತ್ತು ವೀರೇಂದ್ರ ಹೆಗ್ಗಡೆಯವರ ಅಭಿಮಾನಿಗಳಾದ ನಮಗೆ ಅತ್ಯಂತ ದುಃಖವಾಗಿದೆ.

ಕ್ಷೇತ್ರದ ಹೆಸರಿಕೆ ಕಳಂಕ ತರುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಯೂ ಟ್ಯೂಬರ್ ಸಮೀರ್, ವಕೀಲ ಬಾಲನ್ ಅವರ ವಿರುದ್ಧ ತುರ್ತಾಗಿ ಕ್ರಮ ವಹಿಸಬೇಕು ಎಂದು ಒತ್ತಾಯಿಸಲಾಯಿತು.
ಬಾಹುಬಲಿ ಬೆಟ್ಟದ ಬುಡದಲ್ಲಿ ಕೂಡ ಅಸ್ತಿಪಂಜರಕ್ಕಾಗಿ ಅಗೆದಿರುವುದನ್ನು ನಾವು ಖಂಡಿಸುತ್ತೇವೆ. ಧರ್ಮಸ್ಥಳದ ಬಗ್ಗೆ ದೂರು ನೀಡಿರುವ ಅನಾಮಿಕ ದೂರುದಾರನಿಗೆ ಮಂಪರು ಪರೀಕ್ಷೆ ಮಾಡಿ ಈ ವಿಷಯದ ಸತ್ಯಾಸತ್ಯತೆ ಹೊರಹಾಕಬೇಕು ಎಂದೂ ಮನವಿಯಲ್ಲಿ ಒತ್ತಾಯಿಸಲಾಯಿತು.
ಮುಖಂಡರಾದ ಕೆ.ಸಿ.ಧರಣೇಂದ್ರ, ಧರ್ಮಪಾಲ್ ಜೈನ್, ಹರ್ಷೇಂದ್ರ ಜೈನ್, ನಾಗಭೂಷಣ್, ಜ್ವಾಲನಯ್ಯ, ಕೀರ್ತಿ ಜೈನ್, ಸವಿಂಜಯ, ನಿರ್ಮಲ್ ಕುಮಾರ್, ವೀರೇಂದ್ರ, ರಾಮಪ್ರಕಾಶ್, ಸುರೇಶ್ ಭಾಗವಹಿಸಿದ್ದರು.
