ಕಳಸ:ಸತತ ಎರಡನೇ ವರ್ಷ ಶಾಸಕಿ ನಯನಾ ಮೋಟಮ್ಮ ಕುದುರೆಮುಖ ಗಿರಿಶ್ರೇಣಿಗೆ ಚಾರಣ ಕೈಗೊಂಡು ತಮ್ಮ ಪರಿಸರಪ್ರೇಮ ಮತ್ತು ಸಾಹಸಪ್ರಿಯತೆ ತೋರಿದ್ದಾರೆ. ಮೂಡಿಗೆರೆ, ಆಲ್ದೂರು ಮತ್ತು ಕಳಸದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಜೊತೆಗೆ ಬುಧವಾರ ಆವರು ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಚಾರಣ ಕೈಗೊಂಡರು.

ಮೂಡಿಗೆರೆ ಕ್ಷೇತ್ರದ 100ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರ ಜೊತೆ ಬುಧವಾರ ಬೆಳ್ಳಂಬೆಳಿಗ್ಗೆ ಅವರು ಕುದುರೆಮುಖ ಗಿರಿಶ್ರೇಣಿ ಕಡೆಗೆ ಚಾರಣ ಆರಂಭಿಸಿದರು. ಎಳೆ ಬಿಸಿಲಿನಲ್ಲಿ ಹುಲ್ಲುಗಾವಲು, ಶೋಲಾ ಕಾಡು, ಹಳ್ಳ ಕೊಳ್ಳ ದಾಟಿ ಅವರು ಗಿರಿಶ್ರೇಣಿಯ ಬುಡದವರೆಗೆ ತಲುಪಿದರು.ಅತ್ಯಂತ ರಮ್ಯ ಪರಿಸರದಲ್ಲಿ ಚುರುಕಾಗಿ, ಲವಲವಿಕೆಯಿಂದ ನಯನಾ ಮೋಟಮ್ಮ ಚಾರಣ ಕೈಗೊಂಡರು.ತಮ್ಮ ಜೊತೆಗೆ ಇದ್ದ ಯುವ ಜನರು ಕೂಡ ಚುರುಕಾಗಿ ಹೆಜ್ಜೆ ಹಾಕುವಂತೆ ಪ್ರೇರಣೆ ನೀಡಿದರು.

ಗಿರಿಶ್ರೇಣಿಯಿಂದ ಬಹಳಷ್ಟು ಪ್ಲಾಸ್ಟಿಕ್ ಕಸವನ್ನು ಕೂಡ ಶಾಸಕರ ತಂಡ ಹೆರಕಿ ತಂದು ಪರಿಸರ ಜಾಗೃತಿ ಮೂಡಿಸಿತು. ಚಾರಣದ ಬಗ್ಗೆ ಮಾತನಾಡಿದ ಅವರು, ಯುವಜನರಲ್ಲಿ ಪರಿಸರ ಕಾಳಜಿ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಅರಿವು ಹಾಗೂ ಜಾಗೃತಿ ಮೂಡಿಸಲು ಈ ಚಾರಣ ಆಯೋಜಿಸಲಾಗಿತ್ತು. ಕುದುರೆಮುಖ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಇನ್ನಷ್ಟು ಬೆಳೆಸುವ ನಿಟ್ಟಿನಲ್ಲಿ ಈ ಚಾರಣ ಸಹಕಾರಿ ಆಗಲಿ ಎಂದು ಆಶಿಸಿದರು.
ಕುದುರೆಮುಖ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಚೇತನ್ ಮತ್ತು ಅರಣ್ಯ ಸಿಬ್ಬಂದಿ ಕೂಡ ಶಾಸಕರೊಂದಿಗೆ ಚಾರಣದಲ್ಲಿ ಭಾಗವಹಿಸಿದ್ದರು.
