ಕಳಸ:ಜೇನು ಕೃಷಿ ಮತ್ತು ತರಬೇತಿಯನ್ನು ತಪಸ್ಸಿನಂತೆ ಮಾಡುತ್ತಿರುವ ಹಳುವಳ್ಳಿ ಸಮೀಪದ ವಲ್ಲಿಕುಡಿಗೆಯ ಚಂದ್ರಶೇಖರ್ ಅವರಿಗೆ ರಾಜ್ಯ ಮಟ್ಟದ ಜೇನು ಕೃಷಿ ಸಾಧಕ ಪ್ರಶಸ್ತಿ ದೊರಕಿದೆ.
ತೋಟಗಾರಿಕಾ ಇಲಾಖೆ, ಕೃಷಿ ತಂತ್ರಜ್ಞರ ಸಂಸ್ಥೆ ಬೆಂಗಳೂರು, ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯ, ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ ನಡೆಸಿದ ವಿಶ್ವ ಆಹಾರ ದಿನ-2015 ಕಾರ್ಯಕ್ರಮದಲ್ಲಿ ರಾಜ್ಯದ 5 ಅತ್ಯುತ್ತಮ ಜೇನು ಕೃಷಿ ಸಾಧಕರಿಗೆ ಪ್ರಶಸ್ತಿ ನೀಡಲಾಯಿತು. ವಲ್ಲಿಕುಡಿಗೆ ಚಂದ್ರಶೇಖರ್ ಕೂಡ ಆ ಪ್ರಶಸ್ತಿ ಪಡೆದ ಹೆಗ್ಗಳಿಕೆ ಸಾಧಿಸಿದರು.

ಕಳೆದ ಮೂರು ದಶಕಗಳಿಂದ ಜೇನು ಕೃಷಿಯ ಜೊತೆಗೆ, ಆಸಕ್ತರಿಗೆ ತರಬೇತಿಯನ್ನೂ ಚಂದ್ರಶೇಖರ್ ಕೊಡುತ್ತಿದ್ದಾರೆ. ಸಾವಿರಾರು ಕೃಷಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅವರು ಜೇನು ಕೃಷಿಯ ತರಬೇತಿಯನ್ನು ಶಾಸ್ತ್ರೀಯವಾಗಿ ನೀಡಿದ್ದಾರೆ. ಸ್ವತಃ ಜೇನು ಪೆಟ್ಟಿಗೆಗಳ ಹಲವಾರು ವಿನೂತನ ಮಾದರಿಗಳನ್ನು ಅವರು ರಚಿಸಿದ್ದಾರೆ. ಜಿಲ್ಲೆಯ ವಿವಿಧ ತೋಟಗಳಲ್ಲಿ ಜೇನು ಪೆಟ್ಟಿಗೆ ಇರಿಸಿ ಕೃಷಿಕರಿಗೆ ಆದಾಯ ತರುವ ಜೊತೆಗೆ ತೋಟಗಾರಿಕಾ ಬೆಳೆಗಳಲ್ಲಿ ಹೆಚ್ಚಿನ ಉತ್ಪಾದಕತೆ ಬರಲು ಶ್ರಮಿಸುತ್ತಿದ್ದಾರೆ.
ಜೇನು ಕುಟುಂಬಗಳ ನಿರ್ವಹಣೆ ಮತ್ತು ಅಭಿವೃದ್ಧಿಯಲ್ಲಿ ನೈಪುಣ್ಯ ಪಡೆದಿರುವ ಚಂದ್ರಶೇಖರ್ ನಸಿರು ಜೇನಿನ ಕೃಷಿಯಲ್ಲಿ ಕೂಡ ಅನೇಕ ಹೊಸ ಪ್ರಯೋಗ ಮಾಡಿ ಯಶಸ್ವಿ ಆಗಿದ್ದಾರೆ. ಜೇನು ಕುಟುಂಬಗಳನ್ನು ಬೇರ್ಪಡಿಸಿ ಬೇರೆ ಪೆಟ್ಟಿಗೆಗಳಲ್ಲಿ ಕೂರಿಸಿ ಆಸಕ್ತ ರೈತರ ತೋಟದಲ್ಲಿ ತಾವೇ ಸ್ವತಃ ಬಂದು ಅವುಗಳನ್ನು ಕೂರಿಸುವ ಶ್ರದ್ಧೆಯನ್ನು ಚಂದ್ರಶೇಖರ್ ತೋರುತ್ತಾರೆ.ಆಸಕ್ತರು ಅವರನ್ನು 6361215961 ಮೂಲಕ ಸಂಪರ್ಕಿಸಬಹುದು.
