ಕಳಸ ತಾಲ್ಲೂಕಿನ ಕೃಷಿಕರನ್ನು ಕಾಡುತ್ತಿದೆ ಮೀಸಲು ಅರಣ್ಯದ ಗುಮ್ಮ…!
ರವಿ ಕೆಳಂಗಡಿ
ಕಳಸ:ತಾಲ್ಲೂಕಿನಲ್ಲಿ 2 ದಶಕದ ಹಿಂದೆ ಸರ್ಕಾರಿ ವಿರೋಧಿ ಹೋರಾಟಕ್ಕೆ ಕಿಚ್ಚು ಹಚ್ಚಿದ್ದ ಮೀಸಲು ಅರಣ್ಯದ ಕಿಡಿ ಮತ್ತೆ ಕಂಡು ಬರುತ್ತಿದೆ.
ಕಳಸ, ಕಳಕೋಡು, ಹೊರನಾಡು ಮತ್ತಿತರ ಪ್ರದೇಶಗಳ ಮಾವಿನಕೆರೆ, ಕಳಕೋಡು ಮತ್ತು ಅನ್ನಪೂರ್ಣೇಶ್ವರಿ ಮೀಸಲು ಅರಣ್ಯದ ಕೃಷಿಕರಿಗೆ ಭೂದಾಖಲೆಗಳನ್ನು ಒಪ್ಪಿಸುವಂತೆ ಅರಣ್ಯ ಇಲಾಖೆ ಬರೆದಿರುವ ಪತ್ರ ಕೃಷಿಕರ ಆತಂಕ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ.
ಕಳಸ ವಲಯ ಅರಣ್ಯಾಧಿಕಾರಿ ಕಚೇರಿಗೆ ಬರುತ್ತಿರುವ ಕೃಷಿಕರು ತಮ್ಮ ಭೂಮಿಯ ದಾಖಲೆಗಳ ಬಗ್ಗೆ ಅರಣ್ಯ ಇಲಾಖೆ ಯಾಕೆ ಮಾಹಿತಿ ಕೇಳಿದೆ ಎಂದು ಪ್ರಶ್ನಿಸುತ್ತಾರೆ. ತಮ್ಮಲ್ಲಿ ಇರುವ ಅರೆ ಬರೆ ದಾಖಲೆಗಳನ್ನೇ ಕೃಷಿಕರು ತೋರಿಸುತ್ತಾರೆ. ಫಾರಂ 53ರಲ್ಲಿ ಅರ್ಜಿ ಸಲ್ಲಿಸಿರುವುದು, ದಶಕಗಳ ಹಿಂದಿನ ಟಿ. ಟಿ. ದಾಖಲೆಯನ್ನೇ ಕಂದಾಯ ದಾಖಲೆ ಎಂದು ಕೃಷಿಕರು ಇಲಾಖೆಗೆ ಕೊಡುತ್ತಿದ್ದಾರೆ.
‘ಕಡೂರಿನ ಅರಣ್ಯ ಸೆಟ್ಲ್ಮೆಂಟ್ ಅಧಿಕಾರಿ ಈ ಹಿಂದೆ ಕಳಸ ತಾಲ್ಲೂಕಿನಲ್ಲಿ ಸಭೆ ನಡೆಸಿ ಹಲವಾರು ಕೃಷಿಕರ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಆಗ ಕೆಲವರ ಮಾಹಿತಿ ಸಿಗದ ಕಾರಣಕ್ಕೆ ಈಗ ದಾಖಲೆ ಸಂಗ್ರಹ ಮಾಡಲಾಗುತ್ತಿದೆ. ಈ ಹಿಂದೆ 4/1 ಅಧಿಸೂಚನೆ ಹೊರಡಿಸಿದ ಭೂಮಿಯಲ್ಲಿ ವಾಸ ಮಾಡುತ್ತಿರುವವರಿಗೆ ಇರುವ ದಾಖಲೆಗಳ ಬಗ್ಗೆ ಇಲಾಖೆ ಮಾಹಿತಿ ಪಡೆಯುತ್ತಿದೆ’ ಎಂದು ಕಳಸ ವಲಯ ಅರಣ್ಯಾಧಿಕಾರಿ ನಿಶ್ಚಿತ್ ಗೌಡ ಸ್ಪಷ್ಟನೆ ಕೊಡುತ್ತಾರೆ.
ಇದು ಒತ್ತುವರಿ ಖುಲ್ಲಾ ನೋಟಿಸ್ ಅಲ್ಲ, ಸೆಕ್ಷನ್ 17 ಅಧಿಸೂಚನೆ ಹೊರಡಿಸುವ ಮೊದಲು ಇಲ್ಲಿನ ಕೃಷಿಕರ ಭೂದಾಖಲೆಗಳನ್ನು ಅರಣ್ಯ ಸೆಟ್ಲ್ಮೆಂಟ್ ಅಧಿಕಾರಿಗೆ ಕಳಿಸುತ್ತೇವೆ. ಯಾವುದೇ ದಾಖಲೆ ಇಲ್ಲದಿದ್ದರೂ ಮೂರು ಎಕರೆವರೆಗಿನ ಕೃಷಿಕರಿಗೆ ಯಾವುದೇ ಚಿಂತೆ ಇಲ್ಲ ಎಂದೂ ನಿಶ್ಚಿತ್ ಸ್ಪಷ್ಟನೆ ನೀಡುತ್ತಾರೆ.
ಆದರೆ ಇದನ್ನು ಒಪ್ಪದ ಕಳಕೋಡು ಗ್ರಾಮ ಪಂಚಾಯಿತಿ ಸದಸ್ಯ ರವಿ ಕುಮಾರ್. ಈ ಹಿಂದೆ 4/1 ನೋಟೊಫಿಕೇಶನ್ ಮಾಡಿದ್ದ ಭೂಮಿಗೆ ಮೀಸಲು ಅರಣ್ಯದ ಅಂತಿಮ ಅಧಿಸೂಚನೆ ಹೊರಡಿಸಲು ಈ ಪ್ರಕ್ರಿಯೆ ನಡೆಯುತ್ತಿದೆ ಎಂದು ದೂರುತ್ತಾರೆ.
ಕೃಷಿಕರಿಗೆ ಅರಿವು ಇಲ್ಲದಂತೆ ಮೀಸಲು ಅರಣ್ಯದ ಅಂತಿಮ ಅಧಿಸೂಚನೆ ಹೊರಡಿಸಿದರೆ ಅರಣ್ಯ ಇಲಾಖೆ ಪರಿಣಾಮ ಎದುರಿಸಬೇಕಾಗುತ್ತದೆ. ರೈತರಿಗೆ ನೋಟಿಸ್ ಕೊಡುವುದು ಮತ್ತು ಬೆದರಿಸುವುದನ್ನು ಅರಣ್ಯ ಇಲಾಖೆ ಮಾಡಬಾರದು ಎಂದು ಬಿಜೆಪಿ ಮುಖಂಡ ಶೇಷಗಿರಿ ಎಚ್ಚರಿಸುತ್ತಾರೆ.
ಈ ಬಗ್ಗೆ ಜೆಡಿಎಸ್ ಮುಖಂಡ ಮಂಜಪ್ಪಯ್ಯ , ಅರಣ್ಯ ಮತ್ತು ಕಂದಾಯ ಭೂಮಿಯ ಜಂಟಿ ಸರ್ವೆ ನಡೆಯುವ ಮುನ್ನ ಯಾವುದೇ ಕಾರಣಕ್ಕೂ ಸೆಕ್ಟನ್ 17ರ ಅಧಿಸೂಚನೆ ಹೊರಡಿಸಬಾರದು. ಅರಣ್ಯ ಇಲಾಖೆ 4/1 ಅಧಿಸೂಚನೆ ಮಾಡಿರುವ ಜಾಗದಲ್ಲಿ ಕೃಷಿಕರ ವಾಸದ ಮನೆ, ಕೃಷಿ ಭೂಮಿಗೆ ಹಕ್ಕು ಪತ್ರ, ಸಾಗುವಳಿ ಚೀಟಿ, 94 ಸಿ ಮಂಜೂರಾತಿ ಇದೆ’ ಎಂದು ಗಮನ ಸೆಳೆಯುತ್ತಾರೆ.
