ಕಳಸ:ಧವಳ ಸಹಕಾರಿ ಸಂಘದ ಕಳಸ ಶಾಖೆಯು ನೂತನ ಕಟ್ಟಡದಲ್ಲಿ ತನ್ನ ಕಚೇರಿಯನ್ನು ಸೋಮವಾರ ಸ್ಥಳಾಂತರಿಸಿತು.
ಹೊಸ ಕಚೇರಿಯನ್ನು ಸಂಘದ ಅಧ್ಯಕ್ಷ ಸುದರ್ಶನ್ ಜೈನ್ ಉದ್ಘಾಟಿಸಿದರು. ಜೊತೆಗೆ ಗೋದಾಮು ಮತ್ತು ಭದ್ರತಾ ಲಾಕರ್ ಸೌಲಭ್ಯವನ್ನೂ ಕೂಡ ಗಣ್ಯರ ಮತ್ತು ಸಂಘದ ನಿರ್ದೇಶಕರ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು.
ಆನಂತರ ನಡೆದ ಸಭೆಯಲ್ಲಿ ಮಾತನಾಡಿದ ಸಂಘದ ಉಪಾಧ್ಯಕ್ಷ ಜಿನೇಂದ್ರ ಕುಮಾರ್, ನಮ್ಮ ಸಹಕಾರ ಸಂಘವು 20 ಕೊಟಿ ದುಡಿಯುವ ಬಂಡವಾಳ ಹೊಂದಿದ್ದು 18 ಕೋಟಿ ರೂಪಾಯಿ ಸಾಲ ನೀಡಿದೆ. 5 ಜಿಲ್ಲೆಗಳಲ್ಲಿ ಕಾರ್ಯಾಚರಣೆ ಮಾಡುವ ಅನುಮತಿ ಪಡೆದಿರುತ್ತದೆ ಎಂದರು.
ಕಳಸ ಶಾಖೆಯು 510 ಷೇರುದಾರರನ್ನು ಹೊಂದಿದ್ದು 5 ಕೋಟಿ ಠೇವಣಿ ಪಡೆದಿದೆ. ಅಗತ್ಯ ಇರುವವರಿಗೆ ಅತ್ಯಂತ ಎಚ್ಚರಿಕೆಯಿಂದ ಸಾಲ ನೀಡಲಾಗುತ್ತಿದ್ದು ಜನರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ ಎಂದರು.
ಉದ್ಯಮಿ ಅರ್ಕಕೀರ್ತಿ ಜೈನ್ ಮಾತನಾಡಿ, ಯಾವುದೇ ವ್ಯವಹಾರದಲ್ಲಿ ದುಡಿಯುವ ಬಂಡವಾಳ ಬೇಗ ಸಿಕ್ಕಷ್ಟೂ ಉದ್ಯಮಿಗಳಿಗೆ ಅನುಕೂಲ ಆಗುತ್ತದೆ. ಸಹಕಾರ ಸಂಘಗಳು ಸಲೀಸಾಗಿ ಸಾಲ ಕೊಡುವುದರಿಂದ ಅಗತ್ಯ ಇರುವರಿಗೆ ಅನುಕೂಲ ಆಗುತ್ತದೆ. ಮದುವೆ,ಖಾಸಗಿ ವಾಹನಗಳಿಗೆ ಸಾಲ ಮಾಡಿದರೆ ಹಣ ವಾಪಸ್ ಬಾರದು ಎಂದು ಅರಿತು ಸಾಲ ಪಡೆಯಿರಿ ಎಂದು ಅವರು ಸಲಹೆ ನೀಡಿದರು.
ಕಾಫಿ ಬೆಳೆಗಾರ ಹಿತ್ಲುಮಕ್ಕಿ ರಾಜೇಂದ್ರ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ರಾಷ್ಟ್ರೀಕೃತ ಬ್ಯಾಂಕುಗಳು ಬೇರೆ ಬ್ಯಾಂಕುಗಳ ಜೊತೆ ವಿಲೀನ ಆದವು. ಆದರ ಅಲ್ಲಿನ ಉದ್ಯಮಿಗಳು ಈಗಲೂ ಹಣಕಾಸು ಸಂಸ್ಥೆಗಳನ್ನು ಸ್ಥಾಪಿಸುವ ಛಲ ಬಿಟ್ಟಿಲ್ಲ ಎಂದರು. ರೈತರಿಗೆ ಹಣಕಾಸಿನ ಅವಶ್ಯಕತೆ ಇರುತ್ತದೆ. ಅದನ್ನು ಸಹಕಾರಿ ಸಂಸ್ಥೆಗಳು ತುಂಬಿ ಕೊಡುತ್ತಿವೆ. ಜನರ ಠೇವಣಿಗೆ ಈ ಸಂಘ ಆಕರ್ಷಕ ಬಡ್ಡಿಯನ್ನೂ ಕೊಡುತ್ತಿದೆ ಎಂದರು.
ಸಂಘದ ನಿರ್ದೇಶಕ ಪುಷ್ಪರಾಜ್ ಜೈನ್ ಮಾತನಾಡಿ, ಕಳಸ ತಾಲ್ಲೂಕಿನಲ್ಲಿ 800 ಜೈನ ಕುಟುಂಬಗಳು ಇದ್ದು ನಮ್ಮ ಸಂಘಕ್ಕೆ ಬೆನ್ನುಲುಬು ಆಗಿದೆ. ನಮ್ಮ ಕಚೇರಿ ಮತ್ತು ದಾಸ್ತಾನು ಮಳಿಗೆಗೆ ರತ್ನವರ್ಮ ಅವರು ಕಟ್ಟಡ ಕೊಟ್ಟು ಸಹಕಾರ ತೋರುತ್ತಿದ್ದಾರೆ. ಬ್ರಹ್ಮದೇವ ಕಳಸ ಶಾಖೆಯ ಪೂರ್ಣ ಜವಾಬ್ದಾರಿ ಹೊತ್ತು ಪ್ರತಿಫಲ ಅಪೇಕ್ಷೆ ಇಲ್ಲದೆ ಕೆಲಸ ಮಾಡುತ್ತಿದ್ದಾರೆ ಎಂದರು.
ಸಂಘದ ನಿರ್ದೇಶಕ ರಾಜೇಶ್ ಮಾತನಾಡಿ, ಸಹಕಾರ ಸಂಘದ ಯಶಸ್ಸು ಅದರ ನೀತಿ ಇರೂಪಣೆ ಮೇಲೆ ನಿಂತಿರುತ್ತದೆ.ಸ್ಥಳೀಯರೇ ಸಹಕಾರ ಸಂಘದ ಸಲಹಾ ಸಮಿತಿಯಲ್ಲಿ ಇರುವುದರಿಂದ ಸ್ಥಳೀಯರ ಅಗತ್ಯಕ್ಕೆ ತಕ್ಕಂತೆ ಸಂಘ ಕೆಲಸ ಮಾಡುತ್ತಿದೆ ಎಂದರು.
ನಿರ್ದೇಶಕ ಬ್ರಹ್ಮದೇವ ಮಾತನಾಡಿ, 2 ವರ್ಷದಲ್ಲಿ ನಮ್ಮ ಸಂಘವು ಬಹಳ ಕೆಲಸ ಮಾಡಿದೆ. ಇನ್ನೂ ಬಹುದೂರ ಸಾಗಬೇಕಿದೆ ಎಂಬುದನ್ನು ಅರಿತು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದೇವೆ. ಸಹಕಾರ ಕೊಡುತ್ತಿರುವ ಎಲ್ಲರಿಗೂ ಸಂಘ ಅಭಾರಿ ಆಗಿದೆ ಎಂದರು.
ಸಂಘದ ಅಧ್ಯಕ್ಷ ಸುದರ್ಶನ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ನಿದೇರ್ಶಕರಾದ ಸುಭಾಶ್ಚಂದ್ರ, ಸಚಿನ್, ಪ್ರದೀಪ್, ಶಿಶುಪಾಲ್, ಪ್ರಮೋದ್, ರಾಜಶ್ರೀ, ಸಲಹಾ ಮಂಡಳಿ ಸದಸ್ಯರಾದ ಹೆಚ್.ಸಿ.ಅಣ್ಣಯ್ಯ, ಶ್ರೇಣಿಕ, ನಮಿತ್, ಮಹಾವೀರ್, ಆದೀಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿವೇಶ್ ಭಾಗವಹಿಸಿದ್ದರು.
