ಕಳಸ:ಕಲ್ಲಾಟಗುಡ್ಡದಲ್ಲಿ ಭಾನುವಾರ ಸಂಜೆ ಬೆಂಕಿ ಆಕಸ್ಮಿಕದಲ್ಲಿ ಮನೆ ಕಳೆದುಕೊಂಡ ಒಂಟಿ ಮಹಿಳೆಗೆ ಹೊರನಾಡು ಕ್ಷೇತ್ರವು ನೆರವು ನೀಡಿದೆ. ಸೋಮವಾರ ಶ್ರೀ ಕ್ಷೇತ್ರ ಹೊರನಾಡಿನ ವತಿಯಿಂದ ಒಂದು ತಿಂಗಳಿಗೆ ಬೇಕಾದಷ್ಟು ಎಲ್ಲ ಬಗೆಯ ದಿನಸಿ, ಹಾಸಿಗೆ, ಬೆಡ್ ಶೀಟ್ ಮತ್ತು 5000 ರೂಪಾಯಿ ನಗದನ್ನು ಶಶಿಕಲಾ ಅವರಿಗೆ ದೇವಸ್ಥಾನದ ಸಿಬ್ಬಂದಿ ಸತೀಶ್ ಹಸ್ತಾಂತರಿಸಿದರು.
ಆಸುಪಾಸಿನ ಕೆಲ ಸಾರ್ವಜನಿಕರು ಕೂಡ ನೆರವಿನ ಹಸ್ತ ಚಾಚಿ ಹೃದಯವಂತಿಕೆ ತೋರಿದ್ದಾರೆ.ಹೊಟೆಲಿನಲ್ಲಿ ಕೆಲಸ ಮಾಡುವ ಕಾರ್ಮಿಕ ಮಹಿಳೆ ಶಶಿಕಲಾ ಅವರ ಮನೆಗೆ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟು ಹೋಗಿತ್ತು.ಮನೆಯಲ್ಲಿದ್ದ ದಿನಬಳಕೆ ವಸ್ತುಗಳು, ದಿನಸಿ, ಬಟ್ಟೆ ಬರೆ,ಹಣ, ದಾಖಲೆಗಳೆಲ್ಲವೂ ಸುಟ್ಟು ಹೋಗಿ ಶಶಿಕಲಾ ಕಂಗೆಟ್ಟದ್ದರು.

ಕಲ್ಮಕ್ಕಿಯ ಅನೇಕ ಗ್ರಾಮಸ್ಥರು ಒಗ್ಗೂಡಿ ಶಶಿಕಲಾ ಅವರ ಮನೆಯು ಇದ್ದ ಸ್ಥಳದಲ್ಲೇ ತಾತ್ಕಾಲಿಕ ಶೆಡ್ ನಿರ್ಮಾಣ ಆರಂಭಿಸಿದ್ದಾರೆ. ಸಿಮೆಂಟ್ ಶೀಟ್ ಮತ್ತು ಕಾಂಕ್ರೀಟ್ ಕಂಬ ಬಳಸಿ ಸ್ಥಳೀಯ ಯುವಕರು ಕೆಲಸ ಮಾಡುತ್ತಿದ್ದಾರೆ. ಎರಡು ದಿನದಲ್ಲಿ ಮನೆ ನಿರ್ಮಾಣ ಮುಗಿಯುವ ಅಂದಾಜು ಇದೆ.
